ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣ-ಆಗಸ್ಟ್ 1ರ ವೇಳೆಗೆ ಫಲಶ್ರುತಿಯನ್ನು ನಿರೀಕ್ಷಿಸುವುದಾಗಿ ಹೇಳಿದ ಸುಪ್ರೀಂಕೋರ್ಟ್

ನವದೆಹಲಿ, ಜು.18- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮಧ್ಯಸ್ಥಿಕೆ ಮುಂದುವರಿಯಲು ಇಂದು ಅವಕಾಶ ನೀಡಿರುವ ಸುಪ್ರೀಂಕೋರ್ಟ್, ಆಗಸ್ಟ್ 1ರ ವೇಳೆಗೆ ವರದಿಯಲ್ಲಿ ಫಲಶ್ರುತಿಯನ್ನು ನಿರೀಕ್ಷಿಸುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು ಮಧ್ಯಸ್ಥಿಕೆಯ ಸಂಧಾನ ಸಮಿತಿಯಿಂದ ಸಲ್ಲಿಸಲಾಗುವ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಈ ಪ್ರಕರಣದಲ್ಲಿ ವಿಚಾರಣೆ ಅಗತ್ಯವಿದೆಯೇ ಎಂಬ ಬಗ್ಗೆ ಆಗಸ್ಟ್ 2ರಂದು ತಾನು ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದೆ.

ಅಯೋಧ್ಯೆಯ ಭೂ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ. ಖಾಲಿಫುಲ್ಲಾ ನೇತೃತ್ವದ ಸಮಿತಿ ಆಗಸ್ಟ್ 1ರೊಳಗೆ ತನ್ನ ವರದಿಯನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಬೇಕಿದ್ದು, ತಾನು ನೀಡಿರುವ ಹಿಂದಿ ಆದೇಶದಂತೆ ವರದಿಯಲ್ಲಿನ ಸಾರಾಂಶಗಳು ಗೌಪ್ಯವಾಗಿರುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಸದರಿ ವರದಿಯಲ್ಲಿನ ಅಂಶಗಳನ್ನು ನಾವು ಸಮಗ್ರವಾಗಿ ಅವಲೋಕಿಸುತ್ತೇವೆ. ಅದರಲ್ಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಾವು ಪ್ರಕರಣ ವಿಚಾರಣೆಯ ದಿನಾಂಕ ನಿಗದಿಗೊಳಿಸುತ್ತೇವೆ, ಅಗತ್ಯವಿದ್ದರೆ ಆಗಸ್ಟ್ 2ರಿಂದಲೇ ಇದನ್ನು ಕೈಗೊಳ್ಳಲಾಗುತ್ತದೆ ಎಂದು ಸಂವಿಧಾನ ಪೀಠ ತಿಳಿಸಿದೆ.

ಸಿಜೆಐ ಗೊಗೊಯಿ ನೇತೃತ್ವದ ಪಂಚ ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್, ಮತ್ತು ಎಸ್.ಎ.ನಜೀರ್ ಇದ್ದಾರೆ.

ಜುಲೈ 31ರವರೆಗೆ ನಡೆಯುವ ಮಧ್ಯಸ್ಥಿಕೆ ಸಂಧಾನಗಳು ಮತ್ತು ವಿಚಾರಣೆಗಳ ಫಲಶ್ರುತಿಗಳನ್ನು ತನಗೆ ಆಗಸ್ಟ್ 1ರ ವೇಳೆಗೆ ಮಾಹಿತಿ ನೀಡುವಂತೆ ಸಮಿತಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ