ಮಾಜಿ ಪಿಎಂ ರಾಜೀವ್‍ಗಾಂಧಿ ಹತ್ಯೆ ಪ್ರಕರಣ-ಹೈಕೋರ್ಟ್‍ನಿಂದ ಎಲ್‍ಟಿಟಿಇ ಸದಸ್ಯೆ ನಳಿನಿ ಸಲ್ಲಿಸಿದ್ದ ಅರ್ಜಿ ವಜಾ

ಚೆನ್ನೈ, ಜು.18- ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಲ್‍ಟಿಟಿಇ ಉಗ್ರಗಾಮಿ ಸಂಘಟನೆ ಸದಸ್ಯೆ ನಳಿನಿ ಶ್ರೀಹರನ್ ತಮ್ಮ ಶೀಘ್ರ ಬಿಡುಗಡೆಗಾಗಿ ತಮಿಳುನಾಡು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಆರ್.ಸುಬ್ಬಯ್ಯ ಮತ್ತು ಶ್ರೀ ಶರವಣನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಳಿನಿ ಅರ್ಜಿಯನ್ನು ಸಂವಿಧಾನದ 361ನೆ ವಿಧಿ ಮತ್ತು ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿ ವಜಾಗೊಳಿಸಿದೆ.

ರಾಜ್ಯಪಾಲರ ಅಧಿಕೃತ ಕರ್ತವ್ಯಗಳಿಗೆ ಸಂಬಂಧಪಟ್ಟಂತೆ ಯಾವುದೇ ನ್ಯಾಯಾಲಯದ ಮುಂದೆ ಗವರ್ನರ್ ಅವರನ್ನು ಪ್ರಶ್ನೆಗೆ ಒಳಪಡಿಸುವ ಅಥವಾ ಉತ್ತರದಾಯಿಯನ್ನಾಗಿ ಮಾಡುವ ಅಧಿಕಾರ ರಾಜ್ಯಸರ್ಕಾರಕ್ಕೆ ಇಲ್ಲ. ಇದು ಸಂವಿಧಾನದ 361ನೆ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಇದೇ ವಿಧಿ ಅಡಿ ಈ ಹಿಂದೆ ಸುಪ್ರೀಂಕೋರ್ಟ್ ಕೂಡ ಆದೇಶ ನೀಡಿದೆ ಎಂಬ ಅಂಶವನ್ನು ಪೀಠವು ಉಲ್ಲೇಖಿಸಿತ್ತು.

ಈ ಹಿನ್ನೆಲೆಯಲ್ಲಿ ಅವಧಿಗೆ ಮುನ್ನ ಬಿಡುಗಡೆಗೆ ಕೋರಿ ನಳಿನಿ ಪರ ವಕೀಲರು ಸಲ್ಲಿಸಿರುವ ಅರ್ಜಿ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಈ ಕುರಿತು ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿ ಮನವಿಯನ್ನು ತಳ್ಳಿಹಾಕಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ