ಸಂವಿಧಾನದ ಗೌರವವನ್ನು ಕಾಪಾಡುವಂತಹ ನಿರ್ಧಾರ ತೆಗೆದುಕೊಳ್ಳುತ್ತೇನೆ-ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.17- ಸುಪ್ರೀಂಕೋರ್ಟ್ ಯಾವುದೇ ಕಾಲಮಿತಿ ವಿಧಿಸದೆ ಇರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಂವಿಧಾನದ ಗೌರವವನ್ನು ಕಾಪಾಡುವಂತಹ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದರಿಂದ ಯಾರಿಗೆ ಲಾಭ, ನಷ್ಟವಾದರೂ ನಾನು ಹೊಣೆಯಲ್ಲ ಎಂದು ಸ್ಪೀಕರ್ ರಮೇಶ್‍ಕುಮಾರ್ ಖಡಾಖಂಡಿತವಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಜೀನಾಮೆ ಅಥವಾ ಅನರ್ಹತೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಯಾವುದೇ ಕಾಲಮಿತಿ ವಿಧಿಸದೆ ಮಾರ್ಮಿಕವಾಗಿ ಹೇಳುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚುವಂತೆ ಮಾಡಿದೆ.

ಸುಪ್ರೀಂಕೋರ್ಟ್ ಕಾಲಮಿತಿ ವಿಧಿಸಿಲ್ಲ ಎಂಬ ಕಾರಣಕ್ಕಾಗಿಯೇ ನಾನು ಮನಸೋಯಿಚ್ಚೆ ವರ್ತಿಸುವ ಅಥವಾ ನಿಧಾನ ಮಾಡುವ ಉದ್ದೇಶ ಹೊಂದಿಲ್ಲ.

ದೇಶದ ಸರ್ವೋಚ್ಚ ನ್ಯಾಯಾಲಯದ ವಿಶ್ವಾಸ ಉಳಿಸಿಕೊಂಡು ಸಂವಿಧಾನದ ಗೌರವವನ್ನು ಹೆಚ್ಚಿಸುವಂತೆ ಹೆಜ್ಜೆ ಇಡುತ್ತೇನೆ. ಅನರ್ಹತೆ ಅಥವಾ ರಾಜೀನಾಮೆಯ ಅಂಗೀಕಾರ ಕುರಿತು ನಿಯಮಾವಳಿಗಳಿಗೆ ಒಳಪಟ್ಟು ನಿರ್ಧಾರ ತೆಗೆದುಕೊಳ್ಳುತ್ತೇನೆ. ಸಂವಿಧಾನದ ನಿಯಮಾವಳಿಗಳನ್ನು ಒಂದಿಂಚೂ ಅತ್ತ ಇತ್ತ ಕದಲಲು ಬಿಡುವುದಿಲ್ಲ ಎಂದರು.

ಶಾಸಕರು ಅಧಿವೇಶನದಲ್ಲಿ ಭಾಗವಹಿಸುವಂತೆ ಬಲವಂತ ಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಅವರು, ಇದು ನನಗೆ ಸಂಬಂಧಪಡದ ವಿಷಯ. ಶಾಸಕರು ಅಧಿವೇಶನದಲ್ಲಿ ಭಾಗವಹಿಸುವಂತೆ ಮಾಡುವುದು ಆಯಾ ಪಕ್ಷಗಳಿಗೆ ಸೇರಿದ ಜವಾಬ್ದಾರಿ. ನನ್ನ ಕಡೆಯಿಂದ ಅಧಿವೇಶನ ನಡೆಯುವ ಸಮಯ ಮತ್ತು ಅಜೆಂಡಾವನ್ನು ಶಾಸಕರಿಗೆ ಮಾಹಿತಿ ನೀಡುತ್ತೇವೆ. ಬಂದರೆ ಹಾಜರಾತಿ ಮತ್ತು ಭತ್ಯೆ ಸಿಗುತ್ತದೆ. ಬರದೆ ಇದ್ದರೆ ಗೈರು ಹಾಜರಿಯನ್ನು ನಮೂದಿಸುತ್ತೇವೆ ಎಂದರು.

ಈಗಾಗಲೇ ಸದನದ ಕಾರ್ಯಕಲಾಪಗಳ ಸಮಿತಿಯಲ್ಲಿ ನಿರ್ಧಾರ ಮಾಡಿದಂತೆ ನಾಳೆ ಬೆಳಿಗ್ಗೆ 11 ಗಂಟೆಗೆ ವಿಶ್ವಾಸ ಮತಯಾಚನೆ ಮೇಲಿನ ಚರ್ಚೆ ಆರಂಭಗೊಳ್ಳಲಿದೆ. ಯಾರು ಎಷ್ಟು ಹೊತ್ತು ಚರ್ಚೆ ಮಾಡುತ್ತಾರೆ ಎಂಬುದರ ಮೇಲೆ ಅವಿಶ್ವಾಸ ನಿರ್ಣಯದ ಪ್ರಕ್ರಿಯೆ ಅವಲಂಬಿತವಾಗಿದೆ.

ಈ ಹಿಂದೆ ಮೊರಾರ್ಜಿ ದೇಸಾಯಿ ಅವರ ಸರ್ಕಾರದ ಮೇಲಿನ ವಿಶ್ವಾಸಮತ ಯಾಚನೆ ಅರ್ಧಗಂಟೆಯಲ್ಲೇ ಮುಗಿದು ಹೋಗಿತ್ತು. ಶಾಸಕರು ಚರ್ಚೆ ಮಾಡಿದರೆ ಸಮಯ ತೆಗೆದುಕೊಳ್ಳುತ್ತದೆ. ಮಾತನಾಡದೆ ಇದ್ದರೆ ಸಮಯ ಮುಗಿದು ಹೋಗುತ್ತದೆ. ಇಲ್ಲಿ ನನ್ನ ಪಾತ್ರ ಕೇವಲ ಅಂಪೈರ್‍ನಂತೆ ಮಾತ್ರ, ನೋ ಬಾಲ್ ಆದರೆ, ನೋಬಾಲ್ ಎನ್ನುತ್ತೇನೆ. ನಾಳೆ ಸಾಂದರ್ಭಿಕವಾಗಿ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಶಾಸಕರ ರಾಜೀನಾಮೆ ಪ್ರಕರಣದಲ್ಲಿ ನಾನು ತೆಗೆದುಕೊಳ್ಳುವ ನಿರ್ಧಾರ ಕಾನೂನುಬದ್ಧವಾಗಿರುತ್ತದೆ. ಈಗ ಹಗ್ಗಜಗ್ಗಾಟದಲ್ಲಿ ತೊಡಗಿರುವವರಿಗೆ ನನ್ನ ನಿರ್ಧಾರದಿಂದ ಲಾಭವಾಗುತ್ತದೋ, ನಷ್ಟವಾಗುತ್ತದೋ ಅದು ನನಗೆ ಸಂಬಂಧಪಡದ ವಿಷಯ. ಯಾರದೋ ರಾಜಕೀಯ ಆಶೋತ್ತರಗಳಿಗೆ ನಾನು ಹೊಣೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ