ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಬಂಧನ

ಇಸ್ಲಾಮಬಾದ್,ಜು.17– ಮುಂಬೈ ಭಯೋತ್ಪಾದನಾ ದಾಳಿ ರೂವಾರಿ ಹಾಗೂ ಜಮಾತ್ ಉದ್ ದವಾ ಸಂಘಟನೆಯ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಪಾಕಿಸ್ತಾನದ ಭಯೋತ್ಪಾದನನಿಗ್ರಹ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಅಂತಾರಾಷ್ಟ್ರೀಯ ವ್ಯಾಪಕ ಒತ್ತಡಕ್ಕೆ ಕೊನೆಗೂ ಮಣಿದ ಪಾಕಿಸ್ತಾನ ನರರೂಪದ ರಾಕ್ಷಸ ಹಫೀಜ್‍ನನ್ನು ಬಂಧಿಸಿದೆ.
ಲಾಹೋರ್‍ನಿಂದ ಗುಜ್ರನವಾಲಾಗೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಕುಖ್ಯಾತ ಉಗ್ರನನ್ನು ಸಿಟಿಡಿ ಅಧಿಕಾರಿಗಳು ಬಂಧಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂಬೈ ದಾಳಿ ಅಲ್ಲದೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿ ಕುಮಕ್ಕು ನೀಡಿದ್ದ ಹಫೀಜ್ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕೆ,ಇಂಗ್ಲೆಂಡ್, ಫ್ರಾನ್ಸ್ ಮತ್ತು ಭಾರತ ಸೇರಿದಂತೆ ಅನೇಕ ದೇಶಗಳು ಪಾಕಿಸ್ತಾನದ ಮೇಲೆ ಒತ್ತಡ ಹಾಕಿದ್ದವು.

ಅಕ್ರಮ ಚಟುವಟಿಕೆಗಳಿಗಾಗಿ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಫೀಜ್ ಮತ್ತು ಇತರ ಮೂವರನ್ನು ಮೇಲ್ನೋಟಕ್ಕೆ ಬಂಧಿಸಲಾಗಿದೆಯಾದರೂ ಈತನ ವಿರುದ್ಧ ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದಂತೆ ಬಲವಾದ ಪ್ರಕರಣಗಳನ್ನು ಅಧಿಕಾರಿಗಳು ದಾಖಲಿಸುವ ಸಾಧ್ಯತೆ ಇದೆ.

ಉಗ್ರರ ಸುರಕ್ಷಿತ ಸ್ವರ್ಗ ಎನಿಸಿರುವ ಪಾಕಿಸ್ತಾನದಲ್ಲಿ ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಪಾಕ್ ಸರ್ಕಾರ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿತ್ತು.

ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪಾಕಿಸ್ತಾನದ ಅಧಿಕಾರಿಗಳು ಹಫೀಜ್ ಮತ್ತು ಆತನ ಬೆಂಬಲಿಗರ ಸಂಘಟನೆಗಳಿಗೆ ಸೇರಿದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ತನ್ನ ಭಯೋತ್ಪಾದನೆ ಸಂಘಟನೆಯನ್ನು ಕಪ್ಪುಪಟ್ಟಿಗೆ ಸೇರಿಸಿದ ನಂತರ ಹಫೀಜ್ ಸಮಾಜ ಸೇವೆ ಸೋಗಿನಲ್ಲಿ ಜೆಯುಡಿ ಸಂಘಟನೆಯನ್ನು ಸಾಧಿಸಿ ಆ ಮೂಲಕ ಹಣ ಸಂಗ್ರಹಿಸಿ ಭಯೋತ್ಪಾದನೆ ಚಟುವಟಿಕೆಗಳಿಗೆ ನೀಡುತ್ತಿದ್ದ ಆರೋಪಗಳು ಸಹ ಸಾಬೀತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ