ಮೈತ್ರಿ ಸರ್ಕಾರದ ಪತನದ ನಂತರ ಯಡಿಯೂರಪ್ಪ ಅಧಿಕಾರ ಸ್ವೀಕಾರ-ಯಡಿಯೂರಪ್ಪ ಅಧಿಕಾರಸ್ವೀಕರಿಸಿದರೂ ಬಹುಮತ ಸಾಬೀತುಪಡಿಸುವಲ್ಲಿ ಸೋಲಬಹುದು?

ಬೆಂಗಳೂರು,ಜು.16- ಶಾಸಕರ ರಾಜೀನಾಮೆಯಿಂದ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಾಗಿದ್ದು, ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದರೂ ಬಹುಮತ ಸಾಬೀತುಪಡಿಸುವಲ್ಲಿ ಸೋಲಬಹುದು ಎಂಬ ಆತಂಕ ಕಮಲ ಪಕ್ಷದ ಹಿರಿಯ ನಾಯಕರಲ್ಲಿ ಮೂಡಿದೆ.

ಸದ್ಯದ ರಾಜಕೀಯ ಬೆಳವಣಿಗೆಯಂತೆ ರಾಜೀನಾಮೆ ನೀಡಿರುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ ಉರುಳುವುದು ನಿಶ್ಚಿತ.ಆದರೆ ಬಳಿಕ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೂ ಬಹುಮತ ಸಾಬೀತು ವಿಫಲಗೊಳಿಸಲು ಅಗೋಚರ ಕೈ ಕಾರಣವಾಗಲಿದೆಯೇ?ಎಂಬುದು ಹಲವು ನಾಯಕರ ಅನುಮಾನವಾಗಿದೆ.

ಕುಮಾರಸ್ವಾಮಿ ಅವರ ಸರ್ಕಾರ ಉರುಳುವ ಸನ್ನಿವೇಶ ನಿರ್ಮಾಣವಾಗಿದ್ದರೆ ಕೈ ಪಾಳಯದ ಪ್ರಮುಖ ಶಕ್ತಿಯೊಂದು ಅದಕ್ಕೆ ಮುಖ್ಯ ಕಾರಣ. ಯಾಕೆಂದರೆ ರಾಜೀನಾಮೆ ನೀಡಿರುವ ಶಾಸಕರ ಪೈಕಿ ಅನೇಕರು ಸಿದ್ದರಾಮಯ್ಯನವರವರ ಬೆಂಬಲಿಗರು. ಹೀಗಿರುವಾಗ ಸರ್ಕಾರ ಬೀಳಿಸಿದ ಮೇಲೆ ಈ ಅಗೋಚರ ಶಕ್ತಿ ಯಾವ ಆಟ ಆಡುತ್ತದೆ ಎಂಬ ಕುರಿತು ಗೊಂದಲಗಳಿವೆ.

ಆ ಶಕ್ತಿ ಬಯಸಿದರೆ ಕೆಲ ಶಾಸಕರ ರಾಜೀನಾಮೆ ಅಂಗೀಕಾರವಾಗದಂತೆ ನೋಡಿಕೊಳ್ಳಬಹುದು ಎಂಬುದು ಬಿಜೆಪಿಯ ಹಿರಿಯ ನಾಯಕರಲ್ಲಿ ಮೂಡಿರುವ ಆತಂಕ ಎಂದು ಹೇಳಲಾಗುತ್ತಿದೆ. ಹೀಗೆ ಕೆಲ ಶಾಸಕರ ರಾಜೀನಾಮೆ ಅಂಗೀಕಾರವಾಗದಿದ್ದರೆ ಯಡಿಯೂರಪ್ಪ ಕೂಡ ಮುಖ್ಯಮಂತ್ರಿಯಾದ ಮೇಲೆ ಮೇಲೆ ಬಹುಮತ ಯಾಚನೆ ಮಾಡುವ ಸಂದರ್ಭದಲ್ಲಿ ಈ ಶಾಸಕರು ಮತ ಚಲಾಯಿಸುವ ಹಕ್ಕು ಪಡೆದಿರುತ್ತಾರೆ.

ಆಗ ಈ ಶಾಸಕರು ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಗಳಾಗಲಿ ಎಂದು ಆ ಶಕ್ತಿ ಬಯಸಿದರೆ, ಒಂದರ್ಥದಲ್ಲಿ ಅದು ಈ ಹಿಂದಿದ್ದ ಸರ್ಕಾರದಲ್ಲಿನ ಮಂತ್ರಿ ಮಂಡಲದ ಒಂದು ಭಾಗವೇ ಆಗಲಿದೆ.

ಹೀಗೆ ತಮಗೆ ಇಷ್ಟವಿಲ್ಲದ ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿ ಯಡಿಯೂರಪ್ಪನವರ ಸರ್ಕಾರ ಕೆಲ ಕಾಲದವರೆಗಾದರೂ ಉಳಿಯುವಂತೆ ಮಾಡಿದರೆ ಅದು ಬೇರೆ ಮಾತು. ಆದರೆ ಒಂದು ವೇಳೆ ಯಡಿಯೂರಪ್ಪ ಅವರು ಬಹುಮತ ಯಾಚಿಸುವ ಸಂದರ್ಭದಲ್ಲಿ ಉಲ್ಟಾ ಹೊಡೆದರೆ ಯಡಿಯೂರಪ್ಪನವರ ಸರ್ಕಾರದ ಗತಿ ಏನಾಗುತ್ತದೆ?ಎಂಬುದು ಬಿಜೆಪಿ ನಾಯಕರ ಅನುಮಾನವಾಗಿದೆ.

ಹಾಗೇನಾದರೂ ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತವಾಗಿದೆ. ಯಾವ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿ ಶಾಸಕರು ಮಧ್ಯಂತರ ಚುನಾವಣೆಯನ್ನು ಬಯಸುತ್ತಿಲ್ಲ.

ಆದರೆ ಎರಡು ದಿನಗಳ ಹಿಂದೆ ಹಿರಿಯ ನಾಯಕ ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ ಅವರು ದೆಹಲಿಗೆ ಹೋಗಿ ವರಿಷ್ಠರ ಬಳಿ ರಾಜ್ಯ ರಾಜಕೀಯದ ವಿವರ ನೀಡಿದ್ದು, ಯಡಿಯೂರಪ್ಪ ಸಿಎಂ ಆಗಿ ಬಹುಮತ ಸಾಬೀತುಪಡಿಸಲು ವಿಫಲರಾದರೆ ಮಧ್ಯಂತರ ಚುನಾವಣೆಗೆ ಅಣಿಯಾಗಿ ಎಂದು ಅಮಿತ್ ಷಾ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ರಾಜ್ಯ ಬಿಜೆಪಿ ನಾಯಕರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ