ಎಸ್‍ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೆನೆ-ಮಾಜಿ ಸಚಿವ ರೋಷನ್ ಬೇಗ್

ಬೆಂಗಳೂರು, ಜು.16- ನಾನೇಲ್ಲೂ ಹೋಗುವುದಿಲ್ಲ. ಎಸ್‍ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಸ್ಪಷ್ಟಪಡಿಸಿದ್ದಾರೆ.

ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಪೊಲೀಸರು ನಿನ್ನೆ ರಾತ್ರಿ 10.30ರಲ್ಲಿ ರೋಷನ್‍ಬೇಗ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ರಾತ್ರಿಯಿಂದ ಸುಮಾರು 14 ಗಂಟೆ ಕಾಲ ಎಸ್‍ಐಟಿ ಕಚೇರಿಯಲ್ಲೇ ಇಟ್ಟುಕೊಂಡು ವಿಚಾರಣೆ ನಡೆಸಲಾಗಿತ್ತು.

ಅಲ್ಲಿಂದ ಬಿಡುಗಡೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೋಷನ್‍ಬೇಗ್ ಅವರು, ತಾವು ದೇಶ ಬಿಟ್ಟು ಓಡಿಹೋಗಬಹುದು ಎಂಬ ಅನುಮಾನದಿಂದ ಎಸ್‍ಐಟಿ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದುಕೊಂಡಿದ್ದರು. ನನಗೆ ದೇಶ ಬಿಟ್ಟು ಹೋಗುವ ಯಾವುದೇ ಉದ್ದೇಶವಿರಲಿಲ್ಲ. ವೈಯಕ್ತಿಕ ಕಾರಣಕ್ಕಾಗಿ ನಿನ್ನೆ ಹೊರ ಹೋಗಲು ವಿಮಾನ ನಿಲ್ದಾಣಕ್ಕೆ ತೆರಳಿದ್ದೆ. ಆ ಸಂದರ್ಭದಲ್ಲಿ ಪೊಲೀಸರು ನನ್ನನ್ನು ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.

ಎಸ್‍ಐಟಿ ಪೊಲೀಸರು ಜು.19ರಂದು ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿದ್ದಾರೆ. ಅದರಂತೆ ನಾನು ವಿಚಾರಣೆಗೆ ಹಾಜರಾಗುತ್ತೇನೆ. ಆವರೆಗೂ ನಾನು ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ನನ್ನ ರಾಜೀನಾಮೆ ವಿಷಯದಲ್ಲಿ ಸ್ಪೀಕರ್ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದ ಅವರು, ತಮ್ಮನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ರೋಷನ್‍ಬೇಗ್ ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ