ಇಂದಿನಿಂದ ನಿರುಪಯುಕ್ತ ಎಲಕ್ಟ್ರಾನಿಕ್ ಉಪಕರಣಗಳ ಸಂಗ್ರಹ ಅಭಿಯಾನ-ಬಿಬಿಎಂಪಿಯಿಂದ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ಜು.15- ಇಂದಿನಿಂದ ಒಂದು ತಿಂಗಳ ಕಾಲ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳ ಸಂಗ್ರಹ ಅಭಿಯಾನಕ್ಕೆ ಬಿಬಿಎಂಪಿ ಚಾಲನೆ ನೀಡಿದೆ.

ಸಾರ್ವಜನಿಕರು ತಮ್ಮ ಬಳಿ ಇರುವ ಇ-ವೇಸ್ಟ್‍ಅನ್ನು ಬಿಬಿಎಂಪಿಯ ಎಂಟು ವಲಯಗಳಲ್ಲಿ ಸ್ಥಾಪಿಸಿರುವ ಸಂಗ್ರಹಾಗಾರಕ್ಕೆ ತಂದು ಹಾಕಬಹುದಾಗಿದೆ.

ಪಾಲಿಕೆ ಮತ್ತು ಬಿ ರೆಸ್ಪಾನ್ಸಿಬಲ್ ಸ್ವಯಂಸೇವಾ ಸಂಸ್ಥೆ ಸಹಯೋಗದಲ್ಲಿ ಇಂದಿನಿಂದ ಆರಂಭಿಸಿರುವ ಇ-ವೇಸ್ಟ್ ಸಂಗ್ರಹ ಅಭಿಯಾನಕ್ಕೆ ಮೇಯರ್ ಗಂಗಾಂಬಿಕೆ ಇಂದು ಚಾಲನೆ ನೀಡಿದರು.

ಇದುವರೆಗೂ ಇ-ತ್ಯಾಜ್ಯ ವಿಲೇವಾರಿ ಎಲ್ಲಿ ಮಾಡಬೇಕೆಂಬ ಗೊಂದಲಗಳಿದ್ದವು. ಇದೀಗ ಸ್ವಯಂಸೇವಾ ಸಂಸ್ಥೆ ಸಹಯೋಗದೊಂದಿಗೆ ನಿರುಪಯುಕ್ತ ಎಲೆಕ್ಟ್ರಾನಿಕ್ ಉಪಕರಣಗಳನ್ನು ಇ-ತ್ಯಾಜ್ಯದ ಮೂಲಕ ವೈಜ್ಞಾನಿಕ ವಿಲೇವಾರಿ ಮಾಡಲು ಬಿಬಿಎಂಪಿ ಕ್ರಮ ವಹಿಸುತ್ತಿದೆ ಎಂದು ಅವರು ಹೇಳಿದರು.

ನಾಗರಿಕರು ಬಳಕೆಯಾಗದ ಇ-ತ್ಯಾಜ್ಯವನ್ನು ಮನೆ ಮತ್ತು ಕಚೇರಿಗಳಲ್ಲಿ ಇಟ್ಟುಕೊಳ್ಳುವ ಬದಲು ಪಾಲಿಕೆಗೆ ನೀಡಿದರೆ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಹೀಗಾಗಿ ಇಂದಿನಿಂದ ಒಂದು ತಿಂಗಳ ಅಭಿಯಾನ ಆರಂಭಿಸಲಾಗಿದ್ದು, ಎಲ್ಲ ವಲಯ ಕಚೇರಿಗಳಲ್ಲಿ ಇ-ತ್ಯಾಜ್ಯ ಬಿನ್ ಅಳವಡಿಸಲಾಗಿದ್ದು, ತಮ್ಮಲ್ಲಿರುವ ಅನುಪಯುಕ್ತ ವಸ್ತುಗಳನ್ನು ತಂದು ನೀಡುವಂತೆ ಮೇಯರ್ ಮನವಿ ಮಾಡಿಕೊಂಡರು.

ಆರಂಭದಲ್ಲಿ ಎಂಟು ವಲಯ ಕಚೇರಿಗಳಲ್ಲಿ ಇ-ತ್ಯಾಜ್ಯ ಬಿನ್ ಅಳವಡಿಸಲಾಗಿದೆ.ಮುಂದಿನ ಹಂತದಲ್ಲಿ ಎಲ್ಲ 198 ವಾರ್ಡ್‍ಗಳಲ್ಲೂ ಇ-ತ್ಯಾಜ್ಯ ಸಂಗ್ರಹ ಬಿನ್ ಅಳವಡಿಸಲು ಕ್ರಮ ವಹಿಸಲಾಗುವುದು ಎಂದರು.

ಇ-ತ್ಯಾಜ್ಯ ವಿಲೇವಾರಿಗಾಗಿ ಪಾಲಿಕೆ ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಮೇಯರ್ ಗಂಗಾಂಬಿಕೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಉಪಮಹಾಪೌರ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ