ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಅತೃಪ್ತರಿಗೆ ಪಾಠ ಕಲಿಸಬೇಕು; ದೋಸ್ತಿ ನಾಯಕರಿಂದ ಹೊಸ ರಣತಂತ್ರ!

ಬೆಂಗಳೂರು; ಕಾಂಗ್ರೆಸ್ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕೈಬಿಟ್ಟಿರುವ ಮೈತ್ರಿ ನಾಯಕರು ಅಂತಿಮವಾಗಿ, “ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಸರ್ಕಾರದ ವಿರುದ್ಧ ಬಂಡೆದ್ದಿರುವ ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸಬೇಕುಎಂಬ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬಲ್ಲ ಮೂಲಗಳ ಪ್ರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗುತ್ತಿದ್ದಂತೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ಅತೃಪ್ತರನ್ನು ಓಲೈಸುವ ಭರವಸೆ ನೀಡಿದ್ದ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡದಂತೆ ಕುಮಾರಸ್ವಾಮಿಯನ್ನು ತಡೆದಿದ್ದರು. ಇದೀಗ ಕಾಂಗ್ರೆಸ್ ನಾಯಕರ ಎಲ್ಲಾ ಪ್ರಯತ್ನಗಳೂ ನೀರು ಪಾಲಾಗಿವೆ. ಪರಿಣಾಮ ನಿನ್ನೆಯಿಂದ ಕೆಕೆ ಗೆಸ್ಟ್​ಹೌಸ್​ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್ ಹಾಗೂ ದೋಸ್ತಿ ನಾಯಕರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಭಿ ಆಜಾದ್ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ದೋಸ್ತಿ ನಾಯಕರು ನಿನ್ನೆ ರಾತ್ರಿಯಿಂದ ಕೆಕೆ ಗೆಸ್ಟ್​ಹೌಸ್​ ನಲ್ಲಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸತತ ಸಭೆ ನಡೆಸಿದರು. ಆದರೆ ಅಂತಿಮವಾಗಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕೈಬಿಡಲಾಗಿದ್ದು, ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ನಿರ್ಧರಿಸಲಾಗಿದೆ.

ಆದರೆ, ಇದೇ ಸಂದರ್ಭದಲ್ಲಿ ಕಳೆದ ಒಂದು ವಾರದಿಂದ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಬಂಡಾಯ ಶಾಸಕರಿಗೆ ಬುದ್ಧಿ ಕಲಿಸಲು ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದರೂ ಇವರಿಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈಗಾಗಲೇ ಮೈತ್ರಿ ಸರ್ಕಾರದ 15ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿದ್ದಾರೆ. ಹೋಗುವವರು ಹೋಗಲಿ ತೊಂದರೆ ಇಲ್ಲ. ಆದರೆ, ಪಕ್ಷದಿಂದ ಹೊರ ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅವರ ರಾಜಕೀಯ ಭವಿಷ್ಯಕ್ಕೆ ಕಂಟಕ ತರಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಲ್ಲದೆ, ಬಿಜೆಪಿ ಸರ್ಕಾರ ರಚಿಸುವುದಕ್ಕೆ ಆದಷ್ಟು ತಡೆಯೊಡ್ಡೋಣ, ಸರ್ಕಾರ ರಚಿಸಿದರೂ ಹೆಚ್ಚು ದಿನ ಸರ್ಕಾರ ನಡೆಸುವುದು ಅವರಿಗೂ ಕಷ್ಟವಿದೆ. ಬಿಜೆಪಿಯಲ್ಲೂ ಸಾಕಷ್ಟು ಗೊಂದಲವಿದ್ದು, ಅವರ ಸರ್ಕಾರದ ವಿರುದ್ಧ ಜನ ತಿರುಗಿ ಬೀಳಲಿದ್ದಾರೆ. ಹೀಗಾಗಿ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸೋಣ, ಈಗಿನಿಂದಲೇ ಪಕ್ಷವನ್ನು ಬೂತ್ ಮಟ್ಟದಿಂದ ಬಲ ಪಡಿಸೋಣ ಇನ್ನೂ ಮೈತ್ರಿಯ ಕುರಿತು ಚರ್ಚೆ ಬೇಡ ಎಂಬ ನಿರ್ಣಯಕ್ಕೆ ಬರಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ