ಕೆಲವರಿಗೆ ಪ್ರಧಾನಿ ಮೋದಿಯವರನ್ನು ಟೀಕಿಸದೆಯಿದ್ದರೆ ತಿಂದಿದ್ದು ಜೀರ್ಣವಾಗುವುದಿಲ್ಲ-ಶಾಸಕ ಸಿ.ಟಿ.ರವಿ

ಬೆಂಗಳೂರು,ಜು.4-ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಪ್ರಯತ್ನಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕೆಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರು ದೇಶ ಕಟ್ಟುವ ಕೆಲಸಲ್ಲಿ ತೊಡಗಿದ್ದಾರೆ. ಅªರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ. ಅಧಿಕಾರ ಕಳೆದುಕೊಂಡಿರುವ ಬೇರೆಯವರು ಅಧಿಕಾರದಲ್ಲಿ ಇರುವುದನ್ನು ಸಹಿಸಲಾಗದವರೆ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಮೋದಿ ಅವರಿಗೆ ಸರ್ಕಾರವನ್ನು ಪತನಗೊಳಿಸಬೇಕು ಎಂದಾದರೆ ಆಪರೇಷನ್ ಕಮಲವನ್ನೇ ಮಾಡಬೇಕಿಲ್ಲ. ಸಮ್ಮಿಶ್ರ ಸರ್ಕಾರ ಮಾಡಿಕೊಂಡಿರುವ ಅವಾಂತರವೇ ಸಾಕಷ್ಟಿವೆ. ಆದರೆ ಬಿಜೆಪಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿಲ್ಲ. ಒಂದು ವೇಳೆ ಸರ್ಕಾರ ಪತನವಾದರೆ ಮುಂದೆ ಬಿಜೆಪಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ.

ಮಂತ್ರಿಗಿರಿ ಸಿಗಲಿಲ್ಲ ಎಂಬ ಕಾರಣಕ್ಕೆ ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರು ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಕೆಲವರಿಗೆ ಮೋದಿ ಅವರನ್ನು ಟೀಕಿಸದೆ ಇದ್ದರೆ ತಿಂದಿದ್ದು ಜೀರ್ಣವಾಗುವುದಿಲ್ಲ. ಆ ಸಾಲಿಗೆ ಸಿದ್ದರಾಮಯ್ಯ ಕೂಡ ಸೇರಿದ್ದಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ಶಾಸಕ ಮಹದೇವ್ ಅವರು ಬಿಜೆಪಿ 30 ಕೋಟಿ ಹಣ ವನ್ನು ತನಗೆ ಕೊಡಲು ತಂದಿದ್ದರು ಎಂದು ಹೇಳಿಕೊಂಡಿದ್ದಾರೆ. ದೇಶದಲ್ಲೇ 11 ಕೋಟಿ ಬಿಜೆಪಿ ಸದಸ್ಯರಿದ್ದಾರೆ. ಅದರಲ್ಲಿ ಯಾರು ಬಂದಿದ್ದರು ಎಂದು ಬಹಿರಂಗಪಡಿಸಬೇಕು. 30ಕೋಟಿ ಎಂದರೆ ಹುಡುಗಾಟದ ಮಾತಲ್ಲ. ಅದನ್ನು ಎಷ್ಟು ಚೀಲದಲ್ಲಿ ತುಂಬಬೇಕು ಎಂಬುದೇ ನಮಗೆ ಗೊತ್ತಿಲ್ಲ. ಕೆಲವರು ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ. ಆ ಮೂಲಕ ಕುಮಾರಸ್ವಾಮಿ ಅವರ ಬಳಿ ಹೋಗಿ ನಾವು ನಿಮ್ಮ ಜೊತೆಯಲ್ಲೇ ಇದ್ದೇವೆ ಆದರೆ ಸಾಲ ಜಾಸ್ತಿಯಿದೆ ಎಂದು ಬ್ಲಾಕ್‍ಮೇಲ್ ಮಾಡುತ್ತಾರೆ.

ಮಹದೇವ್ ಅವರು ಆ ರೀತಿ ಬಾಯಿಗೆ ಬಂದಂತೆ ಹೇಳಿಕೆ ನೀಡಬಾರದು.

ನಮಗೂ ಆರೋಪ ಮಾಡಲು ಗೊತ್ತಿದೆ. ಮಹದೇವ್ ಅವರು 8 ಕೋಟಿ ಕೊಡಿ ಸಾಕು ನಾನು ರಾಜೀನಾಮೆ ನೀಡುತ್ತೇನೆ ಎಂದು ಕೇಳಿದ್ದರು ಎಂದು ನಾವು ಹೇಳಿದರೆ ಅವರ ಗೌರವ ಏನಾಗುತ್ತದೆ ಎಂದು ಪ್ರಶ್ನಿಸಿದರು.

ಮಹದೇವ್ ಅವರ ಬಳಿ ಹಣ ತೆಗೆದುಕೊಂಡು ಹೋದವರು ಯಾರು ಎಂಬುದು ಬಹಿರಂಗವಾಗಬೇಕು, ಈ ಬಗ್ಗೆ ಖುದ್ದು ಅವರೇ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆ ಮಾಡಿಸಬೇಕೆಂದು ಮಹದೇವ್ ಅವರನ್ನು ಒತ್ತಾಯಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಾಗಲಾದರೂ ಲೋಕಸಭೆಯ ಚುನಾವಣೆಯ ಸೋಲಿನ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದು ಸುಳ್ಳಾಗಿದೆ. ಕಾಂಗ್ರೆಸ್‍ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು, ಸುತ್ತಲೂ ಭಟ್ಟಂಗಿಗಳಿಗೆ ತುಂಬಿರುವುದು, ಅಪ್ರಮಾಣಿಕ ನಾಯಕತ್ವದಿಂದಾಗಿ ಕಾಂಗ್ರೆಸ್ ಸೋಲು ಕಂಡಿದೆ. ಅದನ್ನು ವಿಮರ್ಶೆ ಮಾಡಿಕೊಳ್ಳುವ ಬದಲು ಮತ ಯಂತ್ರಗಳ ಮೇಲೆ, ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದ್ದಾರೆ.

ಮುಂದಿನ ಎಐಸಿಸಿ ಅಧ್ಯಕ್ಷರ ರೇಸ್‍ನಲ್ಲಿ ಇರುವವರು ಕೂಡ ರಬ್ಬರ್ ಸ್ಟಾಂಪ್‍ಗಳೇ. ಎರಡು ವರ್ಷಗಳ ನಂತರ ಅಧ್ಯಕ್ಷರನ್ನು ಬದಲಾವಣೆ ಮಾಡಿ ರಾಹುಲ್ ಗಾಂಧಿ ಅವರೇ ಮತ್ತೆ ಬಂದು ಕೂರುವ ಹುನ್ನಾರ ಅಡಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ -ಜೆಡಿಎಸ್ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಬಿಜೆಪಿಯ ಮೇಲೆ ಟೀಕೆ ಮಾಡುವುದನ್ನು ಬಿಡಬೇಕು. ಕಾಂಗ್ರೆಸ್‍ನಲ್ಲಿ ಅಸಮಾಧಾನಗೊಂಡು ರಾಜೀನಾಮೆ ನೀಡುವವರನ್ನು ತಡೆಯಲಾಗುವುದಿಲ್ಲ. ನಮ್ಮ ಪಕ್ಷ ಆಪರೇಷನ್ ಕಮಲ ನಡೆಸುತ್ತಿಲ್ಲ. ದೇವೇಗೌಡರು ಏನು ಆಗಬೇಕು ಅದಕ್ಕೆ ವಿರುದ್ದವಾಗಿ ಮಾತನಾಡುತ್ತಾರೆ. ಮಧ್ಯಂತರ ಚುನಾವಣೆ ಬೇಡ ಎಂದು ಅವರು ಹೇಳಿದರೆ ಅದರರ್ಥ ಬೇಕು ಎಂದಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ