ಮೇಯರ್ ಸ್ಥಾನವನ್ನು ಪಡೆಯಲು ವಾಮಮಾರ್ಗಕ್ಕೆ ಮುಂದಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್

ಬೆಂಗಳೂರು, ಜು.1- ಮೇಯರ್ ಸ್ಥಾನವನ್ನು ಮತ್ತೆ ಪಡೆದುಕೊಳ್ಳಲು ವಾಮಮಾರ್ಗಕ್ಕೆ ಮುಂದಾಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ಕೆಲ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಇಂತಹ ಕಾರ್ಯಕ್ಕೆ ಮುಂದಾಗದೆ ಬಿಜೆಪಿ ಕಾನೂನು ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ನಗರದ ಮತದಾರರ ತೀರ್ಪಿಗೆ ವಿರುದ್ಧವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿದಿದೆ. ಅದೇ ರೀತಿ ಈ ವರ್ಷದ ಕೊನೆ ಅವಧಿಯ ಮೇಯರ್ ಸ್ಥಾನದ ಅಧಿಕಾರ ಹಿಡಿಯಲು ವಾಮಮಾರ್ಗದ ಮೂಲಕ ಹವಣಿಸುತ್ತಿದೆ.

ನಗರದಲ್ಲಿ ವಾಸಿಸುತ್ತಿರುವ ವೇಣುಗೋಪಾಲ್, ಯು.ಬಿ.ವೆಂಕಟೇಶ್, ರಮೇಶ್‍ಗೌಡ ಇಂತಹವರ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೆ ತೊಂದರೆ ಇಲ್ಲ.

ಆದರೆ, ಸಂಖ್ಯಾಬಲ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉತ್ತರ ಕರ್ನಾಟಕ ಮೂಲದವಾರದ ಮೋಹನ್ ಕೊಂಡಜ್ಜಿ ಹಾಗೂ ಮತ್ತಿಬ್ಬರ ಹೆಸರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹುನ್ನಾರ ನಡೆಸುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ ಎಂದರು.

ಈ ಹುನ್ನಾರದ ವಿರುದ್ಧ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಗ ಈ ಅಕ್ರಮಕ್ಕೆ ಉತ್ತರ ನೀಡಲಾಗುವುದು ಎಂದು ಗುಡುಗಿದರು.

ಕಾನೂನು ಪಂಡಿತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನಮರ್ಯಾದೆ ಇದ್ದರೆ ಅಡ್ಡದಾರಿ ಬಿಟ್ಟು ನ್ಯಾಯಸಮ್ಮತವಾಗಿ ಅಧಿಕಾರ ಹಿಡಿಯಬೇಕು. ನಿಮ್ಮ ದುರಂಹಕಾರಕ್ಕೆ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ವಾಮಮಾರ್ಗ ಅನುಸರಿಸಿದರೆ ಪಾಲಿಕೆ ಚುನಾವಣೆಯಲ್ಲೂ ಸಹ ನಗರದ ಜನತೆ ಡಿಪಾಜಿಟ್ (ಠೇವಣಿ) ಕಳೆಯುತ್ತಾರೆ ಎಂದರು.

ಕಳೆದ ಮೇಯರ್ ಚುನಾವಣೆಯಲ್ಲಿ ಡಿಸಿಎಂ ಪರಮೇಶ್ವರ್ ಮತ ಹಾಕಿದ್ದರು.ನಾನು ಆ ಸಂದರ್ಭದಲ್ಲಿ ದೂರು ನೀಡಿದ ನಂತರ ತಮ್ಮ ವಿಳಾಸವನ್ನು ತುಮಕೂರಿಗೆ ಬದಲಾಯಿಸಿದರು. ಮತ್ತೆ ಸಂಖ್ಯಾಬಲ ಹೆಚ್ಚಿಸಲು ಬೇರೆ ಜಿಲ್ಲೆಯ ಎಂಎಲ್‍ಸಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದ್ದಾರೆ.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಹಿಂಬಾಲಕರು ಎಂಎಲ್‍ಸಿ ಸ್ಥಾನ ಪಡೆದು ಮೇಲ್ಮೆನೆಯ ಸ್ಥಾನವನ್ನು ಹರಾಜು ಹಾಕುತ್ತಿದ್ದಾರೆ. ಅಂತಹವರನ್ನು ಕರೆತಂದು ಗೌರವ ಕಡಿಮೆ ಮಾಡಿಕೊಳ್ಳಬೇಡಿ. ಕಳೆದ ಚುನಾವಣೆಯಲ್ಲಿ ಅಕ್ರಮವಾಗಿ ಮತ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಪಾಲಿಕೆ ಆಯುಕ್ತರಿಗೆ ಸೂಚನೆ ಕೈಗೊಂಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ