ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಪುಣೆಯಲ್ಲಿ ಅಪಾರ್ಟ್​ಮೆಂಟ್​ ಗೋಡೆ ಕುಸಿದು 15 ಸಾವು

ಮುಂಬೈ: ರಾಜ್ಯದೆಲ್ಲೆಡೆ ಅನಾವೃಷ್ಟಿಯಿಂದ ಜನ ಕಂಗೆಟ್ಟಿದ್ದರೆ ಪಕ್ಕದ ಮಹಾರಾಷ್ಟ್ರದಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಮಳೆಯ ಆರ್ಭಟ ಮುಂದುವರಿಯಲಿದ್ದು, ಮಳೆಯ ಅಬ್ಬರಕ್ಕೆ ಮೂವರು ಸಾವನ್ನಪ್ಪಿದ್ದಾರೆ.

ಹಾಗೇ, ಪುಣೆಯಲ್ಲಿ ಬಿದ್ದ ಮಳೆಯಿಂದ ಕಾರು ಪಾರ್ಕಿಂಗ್​ನ ಜಾಗದ ಭೂಮಿ ಕುಸಿದಿದ್ದು, 15 ಜನ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಇಲ್ಲಿನ ಅಪಾರ್ಟ್​ಮೆಂಟ್​ ಎದುರು ಇರುವ ವಾಹನಗಳ ಪಾರ್ಕಿಂಗ್​ ಏರಿಯಾದಲ್ಲಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ 15 ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಎನ್​ಡಿಆರ್​ಎಫ್​ (ಭಾರತೀಯ ವಿಪತ್ತು ನಿರ್ವಹಣಾ ದಳ)ದ ರಕ್ಷಣಾ ಸಿಬ್ಬಂದಿ, ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಆಗಮಿಸಿದ್ದಾರೆ.

ಪುಣೆಯ ಕೊಂದ್ವಾದಲ್ಲಿ 60 ಅಡಿ ಎತ್ತರದ ಗೋಡೆ ಕುಸಿತವಾದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಗೋಡೆಯ ಕೆಳಗೆ ಸಣ್ಣ ಗುಡಿಸಲುಗಳಿದ್ದವು. ಅಪಾರ್ಟ್​ಮೆಂಟ್​ನ ಗೋಡೆ ಕುಸಿತವಾದ್ದರಿಂದ ಗುಡಿಸಲುಗಳಲ್ಲಿದ್ದ ಜನರು ಸಾವಿಗೀಡಾಗಿದ್ದಾರೆ. 10ಕ್ಕೂ ಹೆಚ್ಚು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಕುಸಿದ ಮಣ್ಣಿನಡಿಯಲ್ಲಿ ಇನ್ನೂ ನಾಲ್ಕೈದು ಜನ ಸಿಲುಕಿರುವ ಸಾಧ್ಯತೆಯಿರುವುದರಿಂದ ರಕ್ಷಣಾ ಕಾರ್ಯ ಮುಂದುವರೆದಿದೆ. ಘಟನೆಯಲ್ಲಿ ಎಷ್ಟು ಜನ ಗಾಯಗೊಂಡಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಕಳೆದ 24 ಗಂಟೆಗಳಲ್ಲಿ ಪುಣೆಯಲ್ಲಿ 73.1 ಮಿ.ಮೀ. ಮಳೆ ದಾಖಲಾಗಿದೆ. ಇದು 2010ರಿಂದ ನಂತರ ಪುಣೆಯಲ್ಲಿ ದಾಖಲಾಗಿರುವ ಎರಡನೇ ಅತಿಹೆಚ್ಚು ಮಳೆಯಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ 8 ಜನ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆಯ ತುಂಬ ನೀರು ನಿಂತಿದ್ದು, ವಾಹನಗಳು ಮುಂದೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇರುವುದರಿಂದ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ