ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು-ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಜೂ.29-ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ಸೂಚನೆ ನೀಡಿದ್ದಾರೆ.

ನಗರದ ಎಂ.ಎಸ್.ಬಿಲ್ಡಿಂಗ್‍ನಲ್ಲಿ ಕುಳಿತು ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ಬರದ ಛಾಯೆ ಆವರಿಸುತ್ತಿದೆ. ಮುಂಗಾರಿನ ಮಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಬಿತ್ತನೆಯಲ್ಲಿ ಹಿನ್ನಡೆಯಾಗಿದೆ. ಬೆಳೆ ನಷ್ಟ ಒಂದು ಕಡೆಯಾದರೆ, ಉದ್ಯೋಗದ ಕೊರತೆ ಮತ್ತೊಂದು ಕಡೆಯಾಗಿದೆ. ಕಳೆದ ಬಾರಿಗಿಂತಲೂ ಈ ವರ್ಷದ ಬರದ ಛಾಯೆ ಹೆಚ್ಚು ತೀವ್ರತೆ ಹೊಂದುವ ನಿರೀಕ್ಷೆ ಇದೆ. ಹೀಗಾಗಿ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ನಿಭಾಯಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಉದ್ಯೋಗಖಾತ್ರಿ ಯೋಜನೆಯನ್ನು ಸರಿಯಾಗಿ ಬಳಸಿಕೊಂಡು ಜನರಿಗೆ ಉದ್ಯೋಗ ನೀಡಬೇಕು. ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಳ್ಳಬೇಕಾದ ಯೋಜನೆಗಳ ಕ್ರಿಯಾಯೋಜನೆಯನ್ನು ವಿಸ್ತೃತವಾಗಿ ಸಿದ್ದಪಡಿಸಿ ಕಳುಹಿಸಿ ಅನುಮೋದನೆ ಪಡೆದುಕೊಳ್ಳಿ ಎಂದು ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು, ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದರೆ ಅವುಗಳನ್ನು ಸರಿಪಡಿಸಿ ಸುಸಜ್ಜಿತವಾಗಿಟ್ಟುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ