ಜು.1 ರಂದು ತರಗತಿಗಳ ಬೋಧನಾ ಬಹಿಷ್ಕಾರ ಚಳವಳಿ

ಬೆಂಗಳೂರು, ಜೂ.28-ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ ಸಂಘದ ವತಿಯಿಂದ 1 ರಿಂದ 7 ನೇ ತರಗತಿಗಳಿಗೆ ನೇಮಕಾತಿಯಾದ ಶಿಕ್ಷಕರಲ್ಲಿ ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಪದವೀಧರ ಸೇವಾನಿರತ ಶಿಕ್ಷಕರೆಲ್ಲರನ್ನು 1 ರಿಂದ 5 ಕ್ಕೆ ಸೇರಿಸಿ ಹಿಂಬಡ್ತಿ ನೀಡಿರುವುದನ್ನು ವಿರೋಧಿಸಿ ಜು.1 ರಂದು ತರಗತಿಗಳ ಬೋಧನಾ ಬಹಿಷ್ಕಾರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶಶಿಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು ಶಿಕ್ಷಕರಲ್ಲಿ 82 ಸಾವಿರ ಶಿಕ್ಷಕರು ಉನ್ನತ ಪದವಿ ಹೊಂದಿದವರಾಗಿದ್ದು ಕಳೆದ 14 ವರ್ಷಗಳಿಂದ 6-8 ನೇ ತರಗತಿಗಳಲ್ಲಿ ವಿಷಯವಾರು ಬೋಧಿಸುತ್ತಿದ್ದಾರೆ. 2014 ರ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರನ್ನು ಪ್ರಾಥಮಿಕ ಶಾಲಾ ವೃಂದಕ್ಕೆ ಸೇರಿಸಿರುವುದರಿಂದ ಹಿಂಬಡ್ತಿ ನೀಡಿದಂತಾಗಿದೆ ಎಂದು ಆರೋಪಿಸಿದರು.

ಅರ್ಹ ವಿದ್ಯಾರ್ಹತೆ ಮತ್ತು 10 ರಿಂದ 25 ವರ್ಷಗಳ ಬೋಧನಾ ಅನುಭವ ಇರುವ ಎಲ್ಲಾ 82 ಸಾವಿರ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ವೃಂದಕ್ಕೆ ಸೇರ್ಪಡೆ ಮಾಡುವುದು ಹಾಗೂ ಆದೇಶ ಸಿ.ಆರ್ ನಲ್ಲಿ ಹಲವಾರು ಮಾರಕ ಅಂಶಗಳನ್ನು ತಿದ್ದುಪಡಿ ಮಾಡಲು ಹಲವು ಹಂತಗಳಲ್ಲಿ ಹೋರಾಟ ನಡೆಸಿದ್ದೇವೆ ಆದರೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿರುವುದರಿಂದ ಈ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ