ಶಾಸಕ ಭೀಮಾನಾಯಕ್‍ರವರಿಗೆ ಕೆಪಿಸಿಸಿಯಿಂದ ಷೋಕಾಸ್ ನೋಟಿಸ್

ಬೆಂಗಳೂರು,ಜೂ.27-ಈಗಾಗಲೇ ಶಾಸಕ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಿರುವ ಕಾಂಗ್ರೆಸ್, ಮತ್ತೊಬ್ಬ ಶಾಸಕರಿಗೆ ನೋಟಿಸ್ ನೀಡಿದ್ದು, ಶಿಸ್ತು ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಅಗರಿಬೊಮ್ಮನಹಳ್ಳಿಯ ಶಾಸಕ ಭೀಮಾನಾಯಕ್ ಅವರು ಮಾಲಾವಿ ಜಲಾಶಯ ಯೋಜನೆಗೆ ಅಡ್ಡಿಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ಸಚಿವರು ಕಮೀಷನ್ ದಂಧೆ ನಡೆಸುತ್ತಾರೆ, ನಾಲಾಯಕ್ ಸಚಿವ ಎಂದೆಲ್ಲ ಟೀಕೆ ಮಾಡಿದ್ದರು. ಈ ಕುರಿತಂತೆ ಶೋಕಾಸ್ ನೋಟಿಸ್ ನೀಡಿರುವ ಕೆಪಿಸಿಸಿ ಒಂದು ವಾರದೊಳಗೆ ಸಮಜಾಯಿಷಿ ನೀಡುವಂತೆ ಸೂಚಿಸಿದೆ.

ಸಚಿವರ ವಿರುದ್ದ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಲಾಗಿದೆ. ಇದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಲಾಗುವುದು. ವಾರದೊಳಗೆ ಇದಕ್ಕೆ ಸೂಕ್ತ ಸಮಾಜಾಯಿಷಿ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಕಾಂಗ್ರೆಸ್ ಪಕ್ಷದಲ್ಲಿ ದಿನೇ ದಿನೇ ಸಚಿವರು ಹಾಗೂ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಪರಿಪಾಠ ಹೆಚ್ಚಾಗುತ್ತಿದೆ. ಮಾಜಿ ಸಚಿವರೂ ಆಗಿದ್ದ ರೋಷನ್‍ಬೇಗ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು.

ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಭಾರೀ ಚರ್ಚೆಯಾಗಿ ರೋಷನ್‍ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈಗ ಮತ್ತೊಬ್ಬ ಶಾಸಕ ಭೀಮಾನಾಯಕ್ ಅವರಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಮಾಜಿ ಶಾಸಕರು ಮತ್ತು ಹಲವು ನಾಯಕರು ಪಕ್ಷದ ಶಿಸ್ತು ಉಲ್ಲಂಘಿಸಿ ಸಾಕಷ್ಟು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಅವರುಗಳ ವಿರುದ್ಧ ಕೆಪಿಸಿಸಿ ಈವರೆಗೂ ಕ್ರಮ ಕೈಗೊಂಡಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಸಂಖ್ಯಾಬಲ ಬಹಳ ಮುಖ್ಯವಾಗಿದ್ದು, ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಶಾಸಕರನ್ನೇ ಅಮಾನತು ಮಾಡುತ್ತಾ ಹೋದರೆ, ಮುಂದೆ ಸರ್ಕಾರದ ಗತಿಯೇನು ಎಂಬ ಪ್ರಶ್ನೆ ಎದುರಾಗಿದೆ.

ಶಿಸ್ತುಪಾಲನಾ ಕ್ರಮಗಳು ಏಕಪಕ್ಷೀಯವಾಗಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ