ಅಧಿಕಾರಾವಧಿ ಮುಗಿಯುವ ಮೊದಲೇ ಆರ್​ಬಿಐ ಡೆಪ್ಯುಟಿ ಗವರ್ನರ್ ಸ್ಥಾನಕ್ಕೆ ವಿರಳ್ ರಾಜೀನಾಮೆ

ನವದೆಹಲಿ:  ಆರ್​ಬಿಐನ ಡೆಪ್ಯುಟಿ ಗವರ್ನರ್  ವಿರಳ್ ಆಚಾರ್ಯ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 6 ತಿಂಗಳಲ್ಲಿ ಆರ್​ಬಿಐನ ಉನ್ನತ ಹುದ್ದೆಯ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಂತಾಗಿದೆ.

ಕಳೆದ ಡಿಸೆಂಬರ್​ನಲ್ಲಿ ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ ವಿರಳ್ ಆಚಾರ್ಯ ಅವರಿಗೂ ತಮ್ಮ ಸ್ಥಾನದಲ್ಲಿ ಮುಂದುವರೆಯಲು ಮನಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ. 2017ರ ಜ. 23ರಂದು ಆರ್ ಬಿಐ ಗೆ ಸೇರಿದ್ದ ವಿರಳ್ ಆಚಾರ್ಯ ಆರ್ಥಿಕ ಉದಾರೀಕರಣದ ನಂತರ ಆರ್​ಬಿಐಗೆ ನೇಮಕವಾದ ಅತಿ ಕಿರಿಯ ಡೆಪ್ಯುಟಿ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇನ್ನು 6 ತಿಂಗಳಲ್ಲಿ ವಿರಳ್ ಆಚಾರ್ಯ ಅವರ ಅಧಿಕಾರಾವಧಿ ಕೊನೆಗೊಳ್ಳಲಿತ್ತು. ತಮ್ಮ ಅಧಿಕಾರಾವಧಿ ಮುಗಿಯುವ 9 ತಿಂಗಳ ಮೊದಲು ಉರ್ಜಿತ್ ಪಟೇಲ್ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ವಿರಳ್ ಆಚಾರ್ಯ 6 ತಿಂಗಳು ಮೊದಲು ರಾಜೀನಾಮೆ ನೀಡಿದ್ದಾರೆ. ಆರ್​ಬಿಐ ಡೆಪ್ಯುಟಿ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿರಳ್ ಆಚಾರ್ಯ  ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯ ಮುಂದುವರೆಸಲಿದ್ದಾರೆ. ಆರ್​ಬಿಐನಲ್ಲಿ ಈಗ ಎನ್​.ಎಸ್​. ವಿಶ್ವನಾಥನ್, ಬಿ.ಪಿ. ಕನುಂಗೋ, ಎಂ.ಕೆ. ಜೈನ್ ಡೆಪ್ಯುಟಿ ಗವರ್ನರ್​ಗಳಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ