ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಳ್ಳಬೇಕು-ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು, ಜೂ. 22- ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದರನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಂಡು ಮುಂದೆ ಬರಬೇಕೆಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕರೆ ನೀಡಿದರು.

ಪಟ್ಟಾಭಿರಾಮನಗರ ವಾರ್ಡ್‍ನ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿಂದು ರಕ್ಷಾ ಫೌಂಡೇಷನ್ ಹಮ್ಮಿಕೊಂಡಿದ್ದ 9ನೇ ವರ್ಷದ 10ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಕ್ಕೆ ಸಂವಿಧಾನ ತಂದುಕೊಟ್ಟ ಅಂಬೇಡ್ಕರ್ ಅವರ ಕುಟುಂಬ ಸದಸ್ಯರು ಶಾಲಾ ಮೆಟ್ಟಿಲು ಹತ್ತಿರಲಿಲ್ಲ,ಆದರೆ ಅಂಬೇಡ್ಕರ್ ಅವರು ಕಷ್ಟದಲ್ಲೂ ಚೆನ್ನಾಗಿ ಓದಿ ವಿದೇಶಕ್ಕೆ ತೆರಳಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ಅವರು ಬೆಳೆದು ಬಂದ ದಾರಿ ವಿದ್ಯಾರ್ಥಿಗಳಿಗೆ ಮಾದರಿ. ಅದೇ ರೀತಿ ಸ್ವಾಮಿ ವಿವೇಕಾನಂದರು ಅದ್ಭುತ ವಾಗ್ಮಿ, ಅಪ್ಪಟ ದೇಶಪ್ರೇಮಿ ಇಂತಹವರನ್ನು ಪ್ರತಿನಿತ್ಯ ವಿದ್ಯಾರ್ಥಿಗಳು ಸ್ಮರಣೆ ಮಾಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ನೋಟ್‍ಬುಕ್ ವಿತರಿಸಿ ತೆರಳಿದರು.

ಕಾರ್ಯಕ್ರಮದ ರೂವಾರಿ ಸಿ.ಕೆ.ರಾಮಮೂರ್ತಿ ಮಾತನಾಡಿ ಕಳೆದ 9ವರ್ಷಗಳಿಂದ ನಿರಂತರವಾಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ನಮ್ಮ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಜಯನಗರ ಸುತ್ತಮುತ್ತಲ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.

ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ಮಟ್ಟದ ಶೈಕ್ಷಣಿಕ ವಿದ್ಯಾರ್ಥಿಗಳಿಗೆ ಹಾಗೂ ವಿಕಲಚೇತನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಿಸಲಾಗುತ್ತಿದೆ. ಸರ್ಕಾರದ ಮಾನ್ಯತೆ ಪಡೆದ 30 ಶಾಲೆಗಳಿಗೆ ಗೋಡೆ ಗಡಿಯಾರ ಕೊಡುತ್ತಿದ್ದೇವೆ. ಇದೇ ರೀತಿ ಹಲವು ಶಾಲೆಗಳಿಗೆ ವಿವಿಧ ರೀತಿಯ ಸೌಲಭ್ಯ ನೀಡಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಚೆನ್ನಾಗಿ ಮುಂದುವರೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ, ಶಾಸಕಿ ಸೌಮ್ಯರೆಡ್ಡಿ, ಇನ್‍ಪೋಸಿಸ್ಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ, ಮಾಜಿ ಮೇಯರ್ ಎಸ್.ಕೆ.ನಟರಾಜ್, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾಅನುರಾಧ, ನಟಿ ಅಮೂಲ್ಯ, ಪಾಲಿಕೆ ಸದಸ್ಯರಾದ ಎಚ್.ಸಿ.ನಾಗರತ್ನ, ಬೈರಸಂದ್ರ ನಾಗರಾಜ್, ಕೋದಂಡರೆಡ್ಡಿ, ಮಾಜಿ ಸದಸ್ಯರಾದ ಸಿ.ಎಸ್.ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

ಕಳ್ಳನ ಕೈಚಳಕ: ಇತ್ತ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೆ ಜನಸಂದಣಿಯೊಳಗೆ ಕಳ್ಳ ತನ್ನ ಕೈಚಳಕ ತೋರಲು ಹೋಗಿ ಗೂಸಾ ತಿಂದ ಪ್ರಸಂಗ ನಡೆಯಿತು.

ಕಾರ್ಯಕ್ರಮ ನಡೆಯುತ್ತಿದ್ದಾಗ ಗಣ್ಯರು ಇತ್ತ ತಲ್ಲೀನರಾಗಿದ್ದರು. ಇದನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾದ ಕಳ್ಳ ವೇದಿಕೆ ಮೇಲಿದ್ದವರ ಜೇಬಿಗೆ ಕತ್ತರಿ ಹಾಕಿ ಹಣ ಖದೀಯಲು ಯತ್ನಿಸಿದ್ದಾನೆ. ತಕ್ಷಣ ಇದರ ಅರಿವಾಗಿ ಆತನನ್ನು ಹಿಡಿದು ಜನರೇ ಧರ್ಮದೇಟು ಹಾಕಿ ಪೊಲೀಸರಿಗೆ ಒಪ್ಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ