ಮೊದಲು ಸಿಎಂ ಮಮತಾ ಕ್ಷಮೆಯಾಚಿಸಲಿ; ಬಳಿಕ ಸಂಧಾನಕ್ಕೆ ಬರುತ್ತೇವೆ ಎಂದ ಮುಷ್ಕರ ನಿರತ ವೈದ್ಯರು

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಸಂಧಾನಸಭೆ ಆಹ್ವಾನವನ್ನು ಪ್ರತಿಭಟನಾ ನಿರತ ವೈದ್ಯರು ತಿರಸ್ಕರಿಸಿದ್ದಾರೆ. ಸಿಎಂ ಮೊದಲು ಕ್ಷಮೆಯಾಚನೆ ಮಾಡಲಿ ಬಳಿಕ ಸಂದಾನಕ್ಕೆ ಕರೆಯಲಿ ಎಂದು ವೈದ್ಯರು ತಿರುಗೇಟು ನೀಡಿದ್ದಾರೆ.

ಈಕುರಿತು ಪ್ರತಿಭಟನಾ ನಿರತ ವೈದ್ಯರ ವಕ್ತಾರ ಅರಿಂದಮ್ ದತ್ತಾ, ಸಿಎಂ ಮಮತಾ ಬ್ಯಾನರ್ಜಿ ಅವರು ಸಂಧಾನಸಭೆ ಕರೆದಿರುವುದು ಒಳ್ಳೆಯ ವಿಚಾರವೇ. ನಾವೂ ಕೂಡ ಸಚಿವಾಲಯಕ್ಕೆ ತೆರಳಿ ಸಂಧಾನಸಭೆಯಲ್ಲಿ ಮಾತನಾಡುತ್ತೇವೆ. ಆದರೆ ಅದಕ್ಕಿಂತ ಮೊದಲು ಮಮತಾ ಬ್ಯಾನರ್ಜಿ ಅವರು, ನಿಲ್ ರತನ್ ಸರ್ಕಾರ್ ವೈದ್ಯಕೀಯ ಕಾಲೇಜಿಗೆ ಬಂದು ವೈದ್ಯರನ್ನು ಉದ್ದೇಶಿಸಿ ಬೇಷರತ್ ಕ್ಷಮೆ ಕೇಳಬೇಕು. ಬಳಿಕ ನಾವು ಸಿಎಂ ಸಂಧಾನ ಸಭೆಗೆ ಬರುತ್ತೇವೆ ಎಂದು ತಿಳಿಸಿದ್ದಾರೆ.

ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಗಳು ವೈದ್ಯರನ್ನು ಉದ್ದೇಶಿಸಿ ಆಡಿದ್ದ ಮಾತುಗಳು ಸರಿಯಲ್ಲ. ಅವರು ಎಸ್ ಎಸ್ ಕೆಎಂ ಆಸ್ಪತ್ರೆಗೆ ಹೋಗುತ್ತಾರೆ ಎಂದಾದರೆ ಖಂಡಿತಾ ಎನ್ ಆರ್ ಎಸ್ ಆಸ್ಪತ್ರೆಗೂ ಬರಲಿ. ಒಂದು ವೇಳೆ ಅವರು ಬರದೇ ಇದ್ದರೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಅರಿಂದಮ್ ದತ್ತಾ ಹೇಳಿದ್ದಾರೆ.

ನಿನ್ನೆ ಕೋಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಗೆ ತೆರಳಿದ್ದ ಸಿಎಂ ಮಮತಾ ಬ್ಯಾನರ್ಜಿ, ‘ವೈದ್ಯರನ್ನು ಸಂಧಾನಕ್ಕೆ ಕರೆದರೆ ಅವರು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಆದರೂ ನಾನು ಅವರನ್ನು ಕ್ಷಮಿಸಿದ್ದೇನೆ. ಪ್ರತಿಭಟನೆ ಮಾಡುತ್ತಿರುವ ವೈದ್ಯರೆಲ್ಲ ಬಂಗಾಳದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ರಾಜ್ಯದಲ್ಲಿ ಶಾಂತಿ ಕದಡಲು ಬಿಜಿಪಿ ಮತ್ತು ಸಿಪಿಎಂ ಮಾಡುತ್ತಿರುವ ಕುತಂತ್ರ ಇದು ಎಂದು ಆರೋಪಿಸಿದ್ದರು.

`First apologise`: Doctors turn down Didi`s invite

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ