ಎರಡನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಆಹೋರಾತ್ರಿ ಧರಣಿ; ನ್ಯಾಯ ದಕ್ಕುವ ವರೆಗೆ ಹೋರಾಟ ಕೈಬಿಡಲ್ಲ ಎಂದ ಬಿಎಸ್​ವೈ!

ಬೆಂಗಳೂರುರಾಜ್ಯ ಸರ್ಕಾರ ಕಡಿಮೆ ದರದಲ್ಲಿ ಜಿಂದಾಲ್​ ಕಂಪೆನಿಗೆ 3,666 ಎಕರೆ ಭೂಮಿ ಪರಭಾರೆ ಮಾಡಿರುವ ವಿಚಾರವನ್ನು ವಿರೋಧಿಸಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಆಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಮಾಧ್ಯಮ ಜತೆ ಮಾತನಾಡಿರುವ ಯಡಿಯೂರಪ್ಪ, “ಈ ಮೈತ್ರಿ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಇದೇ ಕಾರಣಕ್ಕೆ ಒಂದೆಡೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್​. ವಿಶ್ವನಾಥ್ ರಾಜೀನಾಮೆ ಕೊಟ್ಟ ಬೆನ್ನಿಗೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸಹ ರಾಜೀನಾಮೆ ನೀಡಿದ್ದಾರೆ. ಇದು ಒಂದು ರೀತಿಯ ರಾಜೀನಾಮೆ ಪರ್ವವಾಗಿದ್ದು, ಜಿಂದಾಲ್​ ಕಂಪೆನಿಗೆ ಅಕ್ರಮವಾಗಿ ಭೂಮಿ ಪರಭಾರೆ ಮಾಡಲಾಗಿದೆ. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈವಾಡವೂ ಇದೆ. ಈ ವಿಚಾರವಾಗಿಯೂ ಶೀಘ್ರದಲ್ಲಿ ಮತ್ತಷ್ಟು ನಾಯಕರ ತಲೆದಂಡವಾಗಲಿದೆ” ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಐಎಂಎ ಹಗರಣದ ಕುರಿತು ಮಾತನಾಡಿರುವ ಅವರು, ಐಎಂಎ ಪ್ರಕರಣದಲ್ಲಿ ರೋಷನ್ ಭೇಗ್, ಜಮೀರ್ ಅಹಮದ್‌ಗೆ ಏನು‌ ಸಂಬಂಧ? ಸರ್ಕಾರ ಇದನ್ನು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸಬೇಕು. ಈ ಕುರಿತ ತನಿಖೆಯನ್ನು ಜಾರೀ ನಿರ್ದೇಶನಾಲಯ ಅಥವಾ ಸಿಬಿಐಗೆ ವಹಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಏನಿದು ಜಿಂದಾಲ್ ಪ್ರಕರಣ?
ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ ಪ್ರದೇಶದಲ್ಲಿ ಒಟ್ಟಾರೆ 3,666 ಎಕರೆ ಜಮೀನನ್ನು ಜಿಂದಾಲ್ ಉಕ್ಕು ಸಂಸ್ಥೆಗೆ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು.

ಸರಕಾರಕ್ಕೆ 2 ಸಾವಿರ ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿರುವ ಜಿಂದಾಲ್​ನಂತಹ ಸಂಸ್ಥೆಗೆ ಇಷ್ಟು ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವ ಅವಶ್ಯಕತೆ ಏನು? ಹಾಗೆಯೇ, ಜಿಂದಾಲ್ ಸಂಸ್ಥೆ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪವೂ ಇದೆ. ಇಂಥ ಕಂಪನಿಗೆ ವಿನಾಯಿತಿ ನೀಡುವ ಔಚಿತ್ಯವೇನು ಎಂಬುದು ಹೆಚ್.ಕೆ. ಪಾಟೀಲ್ ಪ್ರಶ್ನಿಸಿದ್ದರು.

ಹೆಚ್​.ಕೆ. ಪಾಟೀಲ್ ಪ್ರಶ್ನೆಯಿಂದಾಗಿ ಮುನ್ನಲೆಗೆ ಬಂದ ಈ ವಿಚಾರವನ್ನು ನಂತರ ಬಿಜೆಪಿ ಹೋರಾಟವಾಗಿ ರೂಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ “ಜಿಂದಾಲ್ ಸಂಸ್ಥೆಗೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿರುವ ಕ್ರಮ ಸರಿಯಲ್ಲ. ಸಚಿವ ಸಂಪುಟದ ಒಪ್ಪಿಗೆಯನ್ನೂ ಪಡೆಯದೆಯೇ ಮಾರಾಟವಾಗಿರುವುದು ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಸಿಎಂ ಆದ ಅವಧಿಯಲ್ಲೇ ಇದು ನಡೆದಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ಜಿಂದಾಲ್ ಪ್ರಕರಣದ ಬಗ್ಗೆ ಏನೂ ಮಾತನಾಡುತ್ತಿಲ್ಲ. ಸೇಡಂನಲ್ಲಿ 1,700 ಎಕರೆ ಭೂಮಿ ನೀಡುವುದರ ಹಿಂದೆ ಸಿದ್ದರಾಮಯ್ಯ ಕೈವಾಡ ಏನು ಎಂಬುದು ಗೊತ್ತಾಗಬೇಕು? ಎಂದು ಒತ್ತಾಯಿಸಿ ಆಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ