ಕಲುಷಿತ ನಗರವಾಗಿ ಪರಿವರ್ತನೆಯಾಗುತ್ತಿರುವ ಸಿಲಿಕಾನ್ ಸಿಟಿ

ಬೆಂಗಳೂರು,ಜೂ.14- ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ, ಉದ್ಯಾನನಗರಿ ಎಂಬೆಲ್ಲಾ ಖ್ಯಾತಿಗೆ ಒಳಗಾಗಿದ್ದ ಬೆಂಗಳೂರು ಕಲುಷಿತ ನಗರವಾಗಿ ಪರಿವರ್ತನೆಯಾಗುತ್ತಿದ್ದು, ಹಲವು ರೋಗರುಜಿನಗಳ ತಾಣವಾಗಿ ಮಾರ್ಪಾಡಾಗುತ್ತಿದೆ.

ಕಲುಷಿತ ನೀರು, ಹೆಚ್ಚುತ್ತಿರುವ ವಾಯುಮಾಲಿನ್ಯ, ಎಲ್ಲೆಂದರಲ್ಲಿ ಕಂಡುಬರುವ ಕಸದ ರಾಶಿಯಿಂದಾಗಿ ವರ್ಷದಿಂದ ವರ್ಷಕ್ಕೆ ರೋಗರುಜಿನಗಳು ಹೆಚ್ಚಾಗುತ್ತಾ ರೋಗಗ್ರಸ್ಥ ನಗರಿ ಎಂಬ ಅಪಖ್ಯಾತಿಗೆ ಒಳಗಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿ ನಾನಾ ರೀತಿಯ ಸಾಂಕ್ರಾಮಿಕ ಹಾಗೂ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿರುವ ಅಂಕಿಅಂಶಗಳು ಬೆಚ್ಚಿ ಬೀಳಿಸುವಂತಿದೆ.

2016ರಲ್ಲಿ 3470 ಮಂದಿಗೆ ಡೆಂಘೀ ರೋಗ ಕಾಣಿಸಿಕೊಂಡಿದ್ದರೆ, 2017ರಲ್ಲಿ 7291 ಮಂದಿಗೆ, 2018ರಲ್ಲಿ 1385 ಮಂದಿ ಡೆಂಘೀ ರೋಗಕ್ಕೆ ಒಳಗಾಗಿದ್ದರೆ, 2019ರಲ್ಲಿ ಇಲ್ಲಿಯವರೆಗೂ 729 ಮಂದಿಗೆ ಮಾರಣಾಂತಿಕ ಡೆಂಘೀ ಕಾಣಿಸಿಕೊಂಡಿದೆ.

2016ರಲ್ಲಿ 40, 2017ರಲ್ಲಿ 124, 2018ರಲ್ಲಿ 139 ಹಾಗೂ 2019ರ ಜೂನ್ ತಿಂಗಳಿನವರೆಗೂ 28 ಮಂದಿ ಚಿಕೂನ್‍ಗುನ್ಯ ಕಾಯಿಲೆಯಿಂದ ಬಳಲುತ್ತಿದ್ದಾರೆ.

2016ರಲ್ಲಿ 179, 2017ರಲ್ಲಿ 411, 2018ರಲ್ಲಿ 324 ಹಾಗೂ ಇಲ್ಲಿಯವರೆಗೆ 143 ಮಂದಿ ಆಹಾರ ಮತ್ತು ನೀರು ಸೇವನೆಯಿಂದ ಬರುವಂತಹ ಟೈಫಾಯ್ಡ್, ಹೆಪಟೈಟಿಸ್, ಕಾಲರಾ ಮತ್ತಿತರ ರೋಗಗಳಿಗೆ ತುತ್ತಾಗಿದ್ದಾರೆ.

ಅಲ್ಲದೆ 2017ರಲ್ಲಿ 1390 ಮಂದಿ , 2018ರಲ್ಲಿ 1766 ಮಂದಿ ಹಾಗೂ 2019ರಲ್ಲಿ 1040ಕ್ಕೂ ಹೆಚ್ಚು ಮಂದಿ ನಾನಾ ಸೋಂಕುಗಳಿಗೆ ಗುರಿಯಾಗಿ ಅನಾರೋಗ್ಯಪೀಡಿತರಾಗಿದ್ದಾರೆ.

ಕಳೆದ ಜನವರಿಯಿಂದ ಇಲ್ಲಿಯವರೆಗೆ 729 ಮಂದಿ ಡೆಂಘೀ ರೋಗಕ್ಕೆ ತುತ್ತಾಗಿದ್ದಾರೆ. ಜನವರಿಯಲ್ಲಿ 42, ಫೆಬ್ರವರಿಯಲ್ಲಿ 57, ಮಾರ್ಚ್‍ನಲ್ಲಿ 67, ಏಪ್ರಿಲ್‍ನಲ್ಲಿ 146, ಮೇ ತಿಂಗಳಿನಲ್ಲಿ 349 ಹಾಗೂ ಜೂನ್ ತಿಂಗಳಿನಲ್ಲಿ 68 ಮಂದಿಯಲ್ಲಿ ಡೆಂಘೀ ರೋಗಲಕ್ಷಣಗಳು ಕಂಡುಬಂದಿವೆ.

2017ರಲ್ಲಿ ನಗರದಲ್ಲಿ ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದ್ದವು. ರೋಗರುಜಿನಗಳನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಬಂಧಪಟ್ಟ ಇಲಾಖೆಗಳು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ 2018ರಲ್ಲಿ ಸ್ವಲ್ಪಮಟ್ಟಿಗೆ ರೋಗಲಕ್ಷಣಗಳಿಗೆ ಕಡಿವಾಣ ಹಾಕಲಾಯಿತು.

ಆದರೆ ಪ್ರಸಕ್ತ ಸಾಲಿನಲ್ಲಿ ಮತ್ತೆ ರೋಗರುಜಿನಗಳು ಉಲ್ಬಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವಲಯವಾರು ವರದಿ:
ಪೂರ್ವ -239, ದಕ್ಷಿಣ-120, ಪಶ್ಚಿಮ-37, ಬೊಮ್ಮನಹಳ್ಳಿ -75, ದಾಸರಹಳ್ಳಿ-21, ಮಹದೇವಪುರ-113, ಆರ್.ಆರ್.ನಗರ-22 ಹಾಗೂ ಯಲಹಂಕದಲ್ಲಿ 18 ಮಂದಿಗೆ ಡೆಂಘೀ ತಗುಲಿದೆ.

ಎಚ್1ಎನ್1 ಉಲ್ಬಣ:
ಕಳೆದ ವರ್ಷ ಹತೋಟಿಗೆ ಬಂದಿದ್ದ ಎಚ್1ಎನ್1 ಮಾರಣಾಂತಿಕ ರೋಗ ಈ ವರ್ಷ ಮತ್ತೆ ಉಲ್ಬಣಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಜನವರಿಯಲ್ಲಿ 207, ಫೆಬ್ರವರಿಯಲ್ಲಿ 285, ಮಾರ್ಚ್‍ನಲ್ಲಿ 378, ಏಪ್ರಿಲ್‍ನಲ್ಲಿ 151, ಮೇ ತಿಂಗಳಿನಲ್ಲಿ 20 ಮಂದಿಯಲ್ಲಿ ಎಚ್1ಎನ್1 ರೋಗಲಕ್ಷಣಗಳು ಪತ್ತೆಯಾಗಿವೆ.

ವಲಯವಾರು ಮಾಹಿತಿ:
ಪೂರ್ವ -262, ದಕ್ಷಿಣ-150, ಪಶ್ಚಿಮ- 56, ಬೊಮ್ಮನಹಳ್ಳಿ-198, ದಾಸರಹಳ್ಳಿ -15, ಮಹದೇವಪುರ-195, ಆರ್.ಆರ್.ನಗರ-57 ಹಾಗೂ ಯಲಹಂಕದಲ್ಲಿ 107 ಮಂದಿಯಲ್ಲಿ ಎಚ್1ಎನ್1 ರೋಗಲಕ್ಷಣಗಳು ಕಂಡುಬಂದಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರ ಜತೆಗೆ ವಾಹನಗಳು ಉಗುಳುವ ಹೊಗೆ, ಧೂಳು ಮತ್ತಿತರ ವಾಯುಮಾಲಿನ್ಯದಿಂದ ನಗರದ ಹಲವಾರು ನಾಗರಿಕರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಲ್ಭಣಿಸುತ್ತಿವೆ.

ನಗರದ ವಾಯುಮಾಲಿನ್ಯ ಹತೋಟಿಗೆ ಕೆಲ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ವಾಯುಮಾಪಕ ಯಂತ್ರಗಳಲ್ಲಿ ಸಂಗ್ರಹವಾಗಿರುವ ಧೂಳಿನ ಕಣಗಳು ಬೆಂಗಳೂರು ನಗರ ಜನ ವಾಸ ಮಾಡಲು ಯೋಗ್ಯವಲ್ಲ ಎಂಬ ಆತಂಕಕಾರಿ ವಿಚಾರವು ಬಯಲಾಗಿತ್ತು.

ಡೆಂಘೀ, ಎಚ್1ಎನ್1 ಅಂತಹ ಮಾರಣಾಂತಿಕ ರೋಗಗಳಿಂದ ಮೃತಪಟ್ಟವರ ಸಂಖ್ಯೆಯನ್ನು ಯಾವುದೇ ಖಾಸಗಿ ಆಸ್ಪತ್ರೆಯವರು ಘೋಷಿಸುವಂತಿಲ್ಲ.ಹೀಗಾಗಿ ಇದುವರೆಗೂ ಅದೆಷ್ಟು ಅಮಾಯಕರು ಸಾಂಕ್ರಾಮಿಕ ರೋಗಗಳಿಂದ ಸಾವನ್ನಪ್ಪಿದ್ದಾರೆ ಎಂಬ ನಿಖರ ಅಂಕಿಸಂಖ್ಯೆ ಬಹಿರಂಗಗೊಂಡಿಲ್ಲ.

ಈ ಎಲ್ಲ ಅಂಕಿಅಂಶಗಳನ್ನು ಪರಿಗಣಿಸಿದರೆ ಒಂದು ಕಾಲದಲ್ಲಿ ಉದ್ಯಾನನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ನಗರ ಈಗ ಕಲುಷಿತನಗರವಾಗಿ ಮಾರ್ಪಾಡಾಗುತ್ತಿರುವುದು ಆತಂಕದ ಸಂಗತಿ.

ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಬೆಂಗಳೂರುನಗರವನ್ನು ವಾಸಯೋಗ್ಯ ನಗರವನ್ನಾಗಿ ಪರಿವರ್ತಿಸಬೇಕಾದ ಅವಶ್ಯಕತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ