ಬಿಜೆಪಿ ನೂತನ ಸಾರಥಿ ನೇಮಕಕ್ಕೆ ತಾತ್ಕಾಲಿಕ ಬ್ರೇಕ್

ನವದೆಹಲಿ: ಬಿಜೆಪಿಗೆ ನೂತನ ಸಾರಥಿ ನೇಮಿಸುವ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ವರ್ಷಾಂತ್ಯದವರೆಗೆ ಅಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ.

ಚುನಾವಣೆ ಗೆಲುವಿನ ಬೆನ್ನಲ್ಲೇ ಪಕ್ಷ ಸಂಘಟನೆಗೆ ಅಮಿತ್ ಷಾ ಒತ್ತು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಅತಿ ಯಶಸ್ವಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ್ದಾರೆ. ಹೀಗಾಗಿ ಸದಸ್ಯತ್ವ ನೋಂದಣಿ ಅಂತ್ಯವಾಗುವರೆಗೂ ಷಾ ಬದಲಾಗುವುದಿಲ್ಲ ಎಂದು ಬಿಜೆಪಿ ತಿಳಿಸಿದೆ.

ಉತ್ತರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ಅಂತ್ಯವಾಗುವರೆಗೂ ಷಾ ಬದಲಾವಣೆ ಮಾಡದಿರಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿ ಸದಸ್ಯತ್ವ ನೋಂದಣಿಯಲ್ಲಿ 11 ಕೋಟಿಗೂ ಅಧಿಕ ಸದಸ್ಯರ ನೋಂದಣಿಯಾಗಿ, ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಖ್ಯಾತಿಯನ್ನು ಬಿಜೆಪಿ ಹೊಂದಿತ್ತು. ಈಗ ಇನ್ನೊಂದು ಹಂತದ ಪಕ್ಷ ಸಂಘಟನೆಗೆ ಷಾ ಮುಂದಾಗಿದ್ದಾರೆ. ವರ್ಷಾಂತ್ಯದವರೆಗೂ ಷಾ ಮುಂದುವರಿಯಲು ಮತ್ತೆ ಅವಧಿ ವಿಸ್ತರಣೆ ಅನಿವಾರ್ಯವಾಗುತ್ತದೆ. ಮೋದಿ-ಷಾ ತಂಡದ ಹಾಲಿ ಚಿಂತನೆಗಳ ಪ್ರಕಾರ ಸದಸ್ಯತ್ವ ನೋಂದಣಿ ಬಳಿಕ ಮತಗಟ್ಟೆ ಹಂತದಿಂದ ರಾಷ್ಟ್ರೀಯ ಘಟಕದವರೆಗೂ ಸಂಘಟನೆಯ ಪುನಾರಚನೆ ಮಾಡಲಾಗುತ್ತದೆ. ಈ ಪುನಾರಚನೆ ಬಳಿಕವೇ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ