ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಟಿ.ಎ.ಶರವಣ

ಬೆಂಗಳೂರು, ಜೂ.6-ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಈ ನಿಗಮಕ್ಕೆ 11 ಕೋಟಿ ರೂ. ಅನುದಾನ ಒದಗಿಸಲಾಗಿದೆ.ಈ ಅನುದಾನವನ್ನು ಒಂದು ನೂರು ಕೋಟಿ ರೂ.ಗಳಿಗೆ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಕೋರಿದರು.

ಆರ್ಯವೈಶ್ಯ ಸಮುದಾಯಕ್ಕೆ ಆಸ್ಪತ್ರೆ, ಶಿಕ್ಷಣ, ವ್ಯಾಪಾರ ಸೇರಿದಂತೆ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಸ್ವಾತಂತ್ರ್ಯ ಬಂದ ನಂತರ ಯಾವ ಸರ್ಕಾರವೂ ಆರ್ಯವೈಶ್ಯ ಸಮುದಾಯವನ್ನು ಗುರುತಿಸಿ ನಿಗಮವನ್ನು ಮಂಜೂರು ಮಾಡಿರಲಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೂತನ ನಿಗಮವನ್ನು ಸ್ಥಾಪಿಸಿದ್ದಾರೆ.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.

ಆರ್ಯವೈಶ್ಯ ಜನಾಂಗದವರು ಸಣ್ಣಪುಟ್ಟ ವ್ಯಾಪಾರಸ್ಥರಾಗಿದ್ದು, ಶಿಕ್ಷಣದಿಂದ ವಂಚಿತರಾಗಿದ್ದಾರೆ.ಸಾಕಷ್ಟು ಬಡವರಿದ್ದಾರೆ. ಅವರ ಕಲ್ಯಾಣಕ್ಕಾಗಿ ನಿಗಮ ಸ್ಥಾಪಿಸಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಲಾಗುವುದು. ವ್ಯಾಪಾರ ಮಾಡಿ ತೆರಿಗೆ ಪಾವತಿಸುವ ನಮ್ಮ ಸಮುದಾಯಕ್ಕೆ ಮೈತ್ರಿ ಸರ್ಕಾರ ಸಾಮಾಜಿಕ ನ್ಯಾಯವನ್ನು ಒದಗಿಸಿದೆ ಎಂದ ಅವರು, ರಾಜ್ಯಾದ್ಯಂತ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿದ ಶರವಣ ಅವರನ್ನು ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ