ನಾಡಿನಲ್ಲಿ ಉತ್ತಮ ಮಳೆಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು, ಜೂ.6- ನಾಡಿನಲ್ಲಿ ಉತ್ತಮ ಮಳೆಗಾಗಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲ ದೇವಾಲಯಗಳಲ್ಲೂ ಪರ್ಜನ್ಯ ಹೋಮ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಮಳೆಗಾಗಿ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ನೆರವೇರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷ ಪೂಜೆ ಹಾಗೂ ಪರ್ಜನ್ಯ ಜಪ ನೆರವೇರಿಸಲಾಯಿತು.

ಮೈಸೂರು: ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ, ಮೈಸೂರು ಅರಮನೆ ಆವರಣದಲ್ಲಿರುವ ಗಣಪತಿ, ವರಾಹ, ಗಾಯತ್ರಿ, ತ್ರಿನೇಶ್ವರ ಕೃಷ್ಣ ಮತ್ತಿತರ ದೇವಾಲಯಗಳು, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 4.30 ರಿಂದ ಸಂಜೆ 6.30ರ ಅವಧಿಯಲ್ಲಿ ವಿಶೇಷ ಪೂಜೆ ಹಾಗೂ ಪರ್ಜನ್ಯ ಜಪ ನೆರವೇರಿಸಲಾಯಿತು.

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವತಿಯಿಂದ ಈ ವಿಶೇಷ ಪೂಜೆ, ಪರ್ಜನ್ಯ ಜಪ ಏರ್ಪಡಿಸಲಾಗಿತ್ತು.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ದೇವಾಲಯದಲ್ಲಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಪರ್ಜನ್ಯ ಪಾರಾಯಣ ಹಾಗೂ ಹೋಮ-ಹವನ ನೆರವೇರಿತು.

ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 5.30 ರಿಂದ 8 ಗಂಟೆವರೆಗೆ ಪೂಜಾ ಕಾರ್ಯಕ್ರಮ ನೆರವೇರಿತು.

ನಂತರ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ನಮ್ಮದು.ಶ್ರಮ ಇದ್ದರೆ ಫಲ ಇರುತ್ತದೆ.ಪೂಜೆಯಿಂದ ಈ ವರ್ಷ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ನನಗಿದೆ.ರಾಜ್ಯಕ್ಕೆ ಉತ್ತಮ ಮಳೆಯಾಗಿ ಜನರು ಬರದಿಂದ ದೂರ ಉಳಿಯುತ್ತಾರೆ ಎಂದರು.

ಋಷ್ಯಶೃಂಗೇಶ್ವರ ಸ್ವಾಮಿ, ಶಾರದಾಂಬೆ, ಶಾಂತಾದೇವಿ ಬಳಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ