ಕರ್ನಾಟಕದಲ್ಲಿ ಸಂಪೂರ್ಣ ವಿಫಲವಾದ ಸ್ಮಾರ್ಟ್ ಸಿಟಿ ಯೋಜನೆ

ಬೆಂಗಳೂರು, ಜೂ.6- ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಸ್ಮಾರ್ಟ್‍ಸಿಟಿ ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕದ 7 ಮಹಾ ನಗರಗಳಿಗೆ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಶೇ.1ರಷ್ಟು ಮಾತ್ರ ಹಣವನ್ನು ಖರ್ಚು ಮಾಡಲಾಗಿದೆ. ರಾಜ್ಯಸರ್ಕಾರದ ಈ ನಿರ್ಲಕ್ಷ್ಯಕ್ಕೆ ಕೇಂದ್ರ ತೀವ್ರ ಅಸಮಾಧಾನ ಹೊರಹಾಕಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ 7 ನಗರಗಳಿಗೆ ವಿವಿಧ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಒಟ್ಟು 6,462 ಕೋಟಿ ರೂ.ಅನುದಾನವನ್ನು ಕೇಂದ್ರದ ನಗರಾಭಿವೃದ್ಧಿ ಇಲಾಖೆ ನಿಗದಿಪಡಿಸಿತ್ತು.

ರಾಜಧಾನಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು ಮತ್ತು ತುಮಕೂರು ನಗರಗಳನ್ನು ಆಯ್ಕೆ ಮಾಡಲಾಗಿತ್ತು.

ಕೇಂದ್ರ ಸರ್ಕಾರ ಈ ಯೋಜನೆಗೆ ಬಿಡುಗಡೆ ಮಾಡಿರುವ 6,462 ಕೋಟಿ ಅನುದಾನದಲ್ಲಿ ರಾಜ್ಯಸರ್ಕಾರ ಕೇವಲ 30.97 ಕೋಟಿ ಅನುದಾನವನ್ನು ಖರ್ಚು ಮಾಡಿದೆ.

ಆಯಾ ವರ್ಷ ಯಾವ ನಗರಗಳಿಗೆ ಎಷ್ಟು ಅನುದಾನ ನಿಗದಿಯಾಗಿರುತ್ತದೆಯೋ ಅಷ್ಟು ಹಣವನ್ನು ಖರ್ಚು ಮಾಡಲೇಬೇಕೆಂಬ ನಿಯಮವಿದೆ. ಒಂದು ವೇಳೆ ಸರ್ಕಾರ ವಿಫಲವಾದರೆ ಅನುದಾನ ಪುನಃ ಕೇಂದ್ರಸರ್ಕಾರಕ್ಕೆ ವಾಪಸ್ಸಾಗುತ್ತದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗದಲ್ಲಿ ಒಂದು ಉದ್ಯಾನವನ, ಮತ್ತೊಂದು ಕಡೆ ರಸ್ತೆ ಅಗಲೀಕರಣ ಮಾಡಲಾಗಿದೆ. ಪಕ್ಕದ ದಾವಣಗೆರೆಯಲ್ಲಿ ನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಆರು ಪಥಗಳ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು.

ಈವರೆಗೂ ರಸ್ತೆ ಅಗಲೀಕರಣವಾಗಿದೆಯೇ ಹೊರತು ನಯಾಪೈಸೆಯ ಕಾಮಗಾರಿ ನಡೆದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತುಮಕೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಇದೇ ಕಥೆ. ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರೇ ಬಹಿರಂಗಪಡಿಸಿದ್ದಾರೆ.

ನೆರೆಯ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಕೇಂದ್ರದ ಅನುದಾನ ಬರುವುದನ್ನೇ ಕಾಯುತ್ತಾರೆ. ಒಂದೇ ಒಂದು ಪೈಸೆಯನ್ನೂ ಹಿಂದಿರುಗಿಸಿರುವ ಉದಾಹರಣೆಗಳಿಲ್ಲ. ಆದರೆ ನಮ್ಮಲ್ಲಿ ಪ್ರತಿಯೊಂದರಲ್ಲೂ ರಾಜಕಾರಣವೇ ನುಸುಳುವುದರಿಂದ ಕೇಂದ್ರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಆಮೆಗತಿ: ಬೆಳಗಾವಿಯಲ್ಲಿ ಈವರೆಗೂ 4.16 ಕೋಟಿ ಮೊತ್ತದ ಆರು ಯೋಜನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. 405.78 ಕೋಟಿ ಮೊತ್ತದ 25 ಯೋಜನೆಗಳು ಚಾಲ್ತಿಯಲ್ಲಿದ್ದರೆ, 10 ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ.

ದಾವಣಗೆರೆಯಲ್ಲಿ 2.69 ಕೋಟಿ ಮೊತ್ತದ 8 ಯೋಜನೆಗಳು ಪೂರ್ಣಗೊಂಡಿದ್ದು, 334.46 ಕೋಟಿ ಮೊತ್ತದ 38 ಯೋಜನೆಗಳು ಚಾಲ್ತಿಯಲ್ಲಿವೆ. 273.43 ಕೋಟಿ ರೂ.ಮೊತ್ತದ 12 ಯೋಜನೆಗಳಿಗೆ ಈಗ ಟೆಂಡರ್ ಕರೆಯಲಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ 3.16 ಕೋಟಿ ಮೊತ್ತದ ಆರು ಯೋಜನೆಗಳು ಸ್ಮಾರ್ಟ್‍ಸಿಟಿ ಯೋಜನೆಯಡಿ ಪೂರ್ಣಗೊಂಡಿವೆ.

213.14 ಕೋಟಿ ಮೊತ್ತದ ಯೋಜನೆಗಳು ಚಾಲ್ತಿಯಲ್ಲಿದ್ದು, 299.44 ಕೋಟಿ ಮೊತ್ತದ 20 ಯೋಜನೆಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ.

ಕರಾವಳಿಯ ಹೆಬ್ಬಾಗಿಲು ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಒಂದೇ ಒಂದು ಯೋಜನೆಯೂ ಅನುಷ್ಠಾನವಾಗಿಲ್ಲ. 66.24 ಕೋಟಿ ಮೊತ್ತದ 10 ಯೋಜನೆಗಳು ಚಾಲ್ತಿಯಲ್ಲಿದ್ದು, 248.5 ಕೋಟಿ ಮೊತ್ತದ 8 ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 66 ಲಕ್ಷ ಮೊತ್ತದ ಎರಡು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 433.11 ಕೋಟಿ ಮೊತ್ತದ 23 ಯೋಜನೆಗಳು ಚಾಲ್ತಿಯಲ್ಲಿದ್ದು, 328.63 ಕೋಟಿ ಮೊತ್ತದ 11 ಯೋಜನೆಗಳು ಟೆಂಡರ್ ಹಂತದಲ್ಲಿವೆ.

ಕಲ್ಪತರು ನಾಡು ತುಮಕೂರಿನಲ್ಲಿ 20.3 ಕೋಟಿ ರೂ. ಮೊತ್ತದ 18 ಯೋಜನೆಗಳು ಪೂರ್ಣಗೊಂಡಿವೆ. 375.49 ಕೋಟಿ ರೂ.34 ಯೋಜನೆಗಳು ಚಾಲ್ತಿಯಲ್ಲಿದ್ದು, 438.25 ಕೋಟಿ ಮೊತ್ತದ 28 ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಯಾವುದೇ ಯೋಜನೆಗಳು 5 ವರ್ಷದ ಹಂತದಲ್ಲಿ ಅನುಷ್ಠಾನವಾಗಿಲ್ಲ. ಮೂವರು ಬಿಜೆಪಿ ಸಂಸದರಿದ್ದರೂ ಇದರ ಬಗ್ಗೆ ಗಮನಹರಿಸದಿರುವುದು ದುರದೃಷ್ಟಕರ. 273 ಕೋಟಿ ಮೊತ್ತದ ಒಂದು ಯೋಜನೆ ಮಾತ್ರ ಚಾಲ್ತಿಯಲ್ಲಿದ್ದು, 259.5 ಕೋಟಿ ಮೊತ್ತದ 2 ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಎರಡನೇ ಹಂತದ ನಗರಗಳಿಗೆ ಕುಡಿಯುವ ನೀರು, ರಸ್ತೆ ಅಗಲೀಕರಣ, ಬೀದಿದೀಪ, ಸಾರ್ವಜನಿಕ ಶೌಚಾಲಯ, ಸಾರಿಗೆ ಸೌಲಭ್ಯ, ಬಸ್ ನಿಲ್ದಾಣಗಳ ನಿರ್ಮಾಣ, ರೈಲ್ವೆ ನಿಲ್ದಾಣಗಳ ಉನ್ನತೀಕರಣ, ಫ್ಲೈಓವರ್ ಸಂಚಾರ ದಟ್ಟಣೆ ನಿವಾರಿಸುವುದು ಸೇರಿದಂತೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ಇದರ ಉದ್ದೇಶ.

2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ ಅಭಿಯಾನಕ್ಕೆ ವಿಶೇಷವಾದ ಗಮನಹರಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ