ಜೂ.15ರಂದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ

ಬೆಂಗಳೂರು, ಜೂ.6-ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಗೋತ್ರಿ ಎಸ್.ವ್ಯಾಸ ಮತ್ತು ಸಹ ಸಂಸ್ಥೆಗಳ ಸಹಯೋಗದೊಂದಿಗೆ ಹಲವು ಜನಪ್ರಿಯ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯೋಗ ಗುರು ಡಾ.ಎನ್.ಆರಾಧ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇದೇ 10ರಿಂದ 20 ರವರೆಗೆ ಉಚಿತ ಯೋಗ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗಿದ್ದು, ಈ ಶಿಬಿರದಲ್ಲಿ ಸುಮಾರು ಒಂದು ಲಕ್ಷ ಸಾರ್ವಜನಿಕರಿಗೆ ಉಚಿತ ತರಬೇತಿ ನೀಡಲಾಗುವುದು. ಆದ್ದರಿಂದ ಶಾಲಾ ಕಾಲೇಜು, ಸಂಘ ಸಂಸ್ಥೆ ಗಳು , ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.

ಜೂ.15 ರಂದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ 10ರಿಂದ 25 ವರ್ಷ ಒಳಗಿನವರು ಭಾಗವಹಿಸಬಹುದು. 16ರಂದು 26 ವರ್ಷ ಮೇಲ್ಪಟ್ಟವರಿಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಸ್ಪರ್ಧೆ ನಡೆಯಲ್ಲಿದ್ದು ಪುರುಷ ಹಾಗು ಮಹಿಳೆಯರಿಗಾಗಿ ಒಟ್ಟು 6ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದರು.

16 ರಂದು ಯೋಗ ವಾಕಥಾನ್‍ನ್ನು ಬೆಳಗ್ಗೆ 8 ಗಂಟೆಗೆ ಬಿ.ಎಂ.ಎಸ್.ಕಾಲೇಜು ಆವರಣದಿಂದ ಪ್ರಾರಂಭವಾಗಿ ರಾಮಕೃಷ್ಣ ಮಠದ ಮುಂಭಾಗದಲ್ಲಿರುವ ಸ್ವಾಮಿ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತ್ತೆ ಕಾಲೇಜು ಆವರಣಕ್ಕೆ ಬಂದು ತಲುಪಲಿದೆ ಎಂದು ತಿಳಿಸಿದರು.

ಈ ವಾಕಥಾನ್‍ನಲ್ಲಿ ಅನೇಕ ಗಣ್ಯ ವ್ಯಕ್ತಿಗಳು, ಸರ್ವಾಜನಿಕರು, ವಿದ್ಯಾರ್ಥಿಗಳು ಸೇರಿ ಸುಮಾರು 3ಸಾವಿರ ಜನರು ಭಾಗವಹಿಸಲಿದ್ದು ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ , ಲೋಕಸಭಾ ಸದಸ್ಯ ತೇಜಸ್ವಿಸೂರ್ಯ, ಅದಮ್ಯಚೇತನ ಸಂಸ್ಥೆ ಅಧ್ಯಕ್ಷ ರವಿಸುಬ್ರಮಣ್ಯ ಸೇರಿದಂತೆ ಮತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದ ಯೋಗಪಟುಗಳಿಗೆ ಪದಕ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ