ಕೆಂಪೇಗೌಡ ಪ್ರಶಸ್ತಿ ಬೇಕಾಬಿಟ್ಟಿ ವಿತರಣೆಗೆ ಬ್ರೇಕ್ ಹಾಕಲು ಮುಂದಾದ ಬಿಬಿಎಂಪಿ

ಬೆಂಗಳೂರು, ಜೂ.6- ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಬೇಕಾಬಿಟ್ಟಿ ವಿತರಣೆಗೆ ಬಿಬಿಎಂಪಿ ಬ್ರೇಕ್ ಹಾಕಲು ಈ ಬಾರಿ ದೃಢ ಸಂಕಲ್ಪ ಮಾಡಿದೆ.

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ನೂರಕಷ್ಟೇ ಸೀಮಿತಗೊಳಿಸಲು ಕಟ್ಟುನಿಟ್ಟಿನ ತೀರ್ಮಾನ ಕೈಗೊಳ್ಳಲಾಗುತ್ತಿದೆ.

ಇದುವರೆಗೆ ಕೆಂಪೇಗೌಡ ಪ್ರಶಸ್ತಿಯನ್ನು 100 ಮಂದಿಗೆ ಮಾತ್ರ ಕೊಡಬೇಕೆಂದು ತೀರ್ಮಾನಿಸಲಾಗುತ್ತಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಶಸ್ತಿಯ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿತ್ತು.

ಕಳೆದ ಬಾರಿಯಂತೂ 400ಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ಕೊಡಮಾಡಲಾಗಿತ್ತು. ಹಾಗಾಗಿ ಪ್ರತೀಬಾರಿ ಪ್ರಶಸ್ತಿ ವಿತರಣಾ ಸಮಾರಂಭ ಗೋಜಲು ಮಯವಾಗುತ್ತಿತ್ತು.

ಪ್ರಶಸ್ತಿ ಒಬ್ಬರಿಗೆ, ಫಲಕ ಇನ್ನೊಬ್ಬರ ಕೈ ಸೇರಿ ಪ್ರಶಸ್ತಿ ಪುರಸ್ಕøತರಿಗೆ ಮುಜುಗರವಾಗುತ್ತಿತ್ತು.ಸಮಾರಂಭ ಗೊಂದಲದ ಗೂಡಾಗುತಿತ್ತು.ಇದರಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಅವಮಾನವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಇದನ್ನೆಲ್ಲಾ ಮನಗಂಡು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಈ ಬಾರಿ ಪ್ರಶಸ್ತಿ ವಿತರಣಾ ಸಮಾರಂಭ ಗೊಜಲು ಮಯವಾಗಬಾರದು. ಪ್ರಶಸ್ತಿ 100 ಮಂದಿಗಷ್ಟೇ ಸೀಮಿತವಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರು ಕರಗದ ದಿನದಂದು ನಡೆಯಬೇಕಿದ್ದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಣಾ ಸಮಾರಂಭ ರದ್ದಾಗಿತ್ತು.

ಹಾಗಾಗಿ ಮತ್ತೆ ಸಮಾರಂಭ ಹಮ್ಮಿಕೊಳ್ಳಲು ಬಿಬಿಎಂಪಿ ಸಿದ್ಧತೆ ಆರಂಭಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಮೇಯರ್ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಡಾ.ಜಿ.ಪರಮೇಶ್ವರ್ ಸೂಚಿಸಿರುವಂತೆ ನೂರು ಮಂದಿಗೆ ಮಾತ್ರ ಪ್ರಶಸ್ತಿ ಕೊಡಲು ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ. ಪ್ರಶಸ್ತಿ ಪುರಸ್ಕøತರ ಆಯ್ಕೆಗೆ ಹಿರಿಯ ಸಾಹಿತಿಯೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗುತ್ತದೆ.

ಮೇಯರ್ ಗಂಗಾಂಬಿಕೆ ಅವರ ಕಾಲದಲ್ಲಾದರೂ ಪ್ರಶಸ್ತಿ ಪುರಸ್ಕøತರ ಸಂಖ್ಯೆ ಕಟ್ಟುನಿಟ್ಟಾಗಿ ನೂರಕ್ಕೆ ಸೀಮಿತಗೊಳ್ಳುವುದೇ ?ಪ್ರಶಸ್ತಿ ವಿತರಣಾ ಸಮಾರಂಭ ಗೌಜಲು, ಗೊಂದಲ ಇಲ್ಲದೆ ಅರ್ಥವತ್ತಾಗಿ ನಡೆಯುವುದೇ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ