ರೋಗಗ್ರಸ್ಥ ಕೇಂದ್ರಗಳಾಗಿ ಪರಿಣಮಿಸುತ್ತಿರುವ ಕೆಲವು ಇಂದಿರಾ ಕ್ಯಾಂಟೀನ್‍ಗಳು

ಬೆಂಗಳೂರು,ಜೂ.4- ಮೃಷ್ಠಾನ್ನ ಭೋಜನವಿದ್ದರೇನು… ಊಟ ಮಾಡಲು ಪ್ರಶಸ್ತ ಜಾಗ ಬೇಡವೇ…? ಬಡವರ ಹಸಿವು ನೀಗಿಸಲು ಸರ್ಕಾರ ಇಂದಿರಾ ಕ್ಯಾಂಟೀನ್‍ಗಳನ್ನೇನೋ ಸ್ಥಾಪಿಸಿದೆ. ಆದರೆ ಸ್ವಚ್ಛತೆಗೆ ಆದ್ಯತೆ ನೀಡದೆ ಇರುವುದರಿಂದ ಕೆಲವು ಕ್ಯಾಂಟೀನ್‍ಗಳು ರೋಗಗ್ರಸ್ಥ ಕೇಂದ್ರಗಳಾಗಿ ಪರಿಣಮಿಸುತ್ತಿವೆ.

ಕೊಳಚೆಯಲ್ಲಿ ಕೂತು ಮೃಷ್ಠಾನ ಭೋಜನ ಮಾಡಿದರೆ ರೋಗರುಜಿನಗಳು ಬರೋದು ಗ್ಯಾರಂಟಿ. ಇನ್ನು ತಿಪ್ಪೆಗುಂಡಿ ಮುಂದಿನ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡಿದವರ ಪಾಡೇನು?

ಇದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಛಲವಾದಿ ಪಾಳ್ಯ ವಾರ್ಡ್‍ನಲ್ಲಿರುವ ಇಂದಿರಾ ಕ್ಯಾಂಟೀನ್ ಸ್ಥಿತಿ. ಇಲ್ಲಿ ಊಟ ಮಾಡಬೇಕೆಂದರೆ ಮೂಗು ಮುಚ್ಚಿಕೊಂಡೇ ಇರಬೇಕು. ಇಲ್ಲದಿದ್ದರೆ ತಿಂದ ಅನ್ನ ಹೊರಬರೋದು ಗ್ಯಾರಂಟಿ.

ಯಾಕೆ ಅಂತೀರಾ… ಕ್ಯಾಂಟೀನ್ ಮುಂಭಾಗದಲ್ಲಿ ಬಿದ್ದಿರುವ ಕಸದ ರಾಶಿ ಕೊಳೆತು ಗಬ್ಬುನಾರುತ್ತಿದೆ. ಇನ್ನು ಎದುರಿನಲ್ಲೇ ಜಾನುವಾರುಗಳನ್ನು ಕಟ್ಟಿಹಾಕಲಾಗಿದ್ದು, ಸಗಣಿ, ಗಂಜಲ ತೆರವು ಮಾಡದೆ ಇರುವುದರಿಂದ ಇಡೀ ಪ್ರದೇಶ ಗಬ್ಬೆದ್ದು ಹೋಗಿದೆ.

ಕ್ಯಾಂಟೀನ್ ಮುಂಭಾಗದ ಕಸದ ರಾಶಿಯಿಂದಾಗಿ ಸೊಳ್ಳೆ-ನೊಣ ಮತ್ತಿತರ ಕ್ರಿಮಿಕೀಟಗಳು ಊಟದ ತಟ್ಟೆಯ ಸುತ್ತ ಗುಯ್‍ಗುಡುತ್ತವೆ. ಇಂತಹ ಪ್ರದೇಶದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಕ್ಯಾಂಟೀನ್‍ಗೆ ಬರುವ ಬಡಪಾಯಿಗಳಿಗೆ ರೋಗ ತಗಲದೆ ಇರುತ್ತದೆಯೇ?

ಇಷ್ಟೆಲ್ಲ ಆದರೂ ಛಲವಾದಿಪಾಳ್ಯ ವಾರ್ಡ್‍ನ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್ ಅವರು ಕ್ಯಾಂಟೀನ್ ಅವ್ಯವಸ್ಥೆಗೂ ನನಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಕಳೆದ ಹಲವಾರು ದಿನಗಳಿಂದ ಇಂದಿರಾ ಕ್ಯಾಂಟೀನ್ ಮುಂದೆ ಕಸದ ರಾಶಿ ಬಿದ್ದು ಕೊಳೆತು ಹೋಗಿದ್ದರೂ ಸಂಬಂಧಪಟ್ಟವರು ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಇಂತಹ ಜಾಗದಲ್ಲಿ ನಾವು ತಿಂಡಿ ತಿನ್ನೋದು ಹೇಗೆ ಸ್ವಾಮಿ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಕ್ಯಾಂಟೀನ್ ಪಕ್ಕದಲ್ಲೇ ಆಸ್ಪತ್ರೆ ಇದ್ದರೂ ಎದುರಲ್ಲೇ ಬಿದ್ದಿರುವ ರಾಶಿ ರಾಶಿ ಕಸ ಕಾಣಿಸದ ಜನಪ್ರತಿನಿಧಿಗಳು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಲಿನಾಲಿ ಮಾಡಿ ಬದುಕುವ ಕಡುಬಡವರ ಹಸಿವು ತಣಿಸಲೆಂದೇ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಮಾಡಿದರೆ ರೋಗ ಖಚಿತ ಎಂದು ಕೆಲವರು ಆರೋಪಿಸಿದ್ದರು.

ಹೀಗಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಗರದ ಹಲವಾರು ಕ್ಯಾಂಟೀನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿ ಊಟದ ಸತ್ವಾಂಶದ ಪರೀಕ್ಷೆಗೆ ಆದೇಶಿಸಿದ್ದರು.

ಸರ್ಕಾರದ ಸೂಚನೆಯಂತೆ ಇಂದಿರಾ ಕ್ಯಾಂಟೀನ್‍ಗಳ ಊಟದ ಬಗ್ಗೆ ಪರೀಕ್ಷೆ ನಡೆಸಿದ ಎಫ್‍ಎಸ್‍ಎಸ್‍ಎಐ ಸಂಸ್ಥೆ, ಇಂದಿರಾ ಕ್ಯಾಂಟೀನ್ ಊಟ ತಿನ್ನಲು ಯೋಗ್ಯವಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಇತ್ತೀಚೆಗಷ್ಟೇ ವರದಿ ನೀಡಿತ್ತು.

ಊಟ ಯೋಗ್ಯವಾಗಿದ್ದರೆ ಸಾಲದು ಊಟ ಮಾಡುವ ಸ್ಥಳವೂ ಕೂಡ ಪ್ರಶಸ್ತವಾಗಿರಬೇಕು. ಇಲ್ಲದಿದ್ದರೆ ರೋಗ ಬರುವುದು ಗ್ಯಾರಂಟಿ. ಸಂಬಂಧಪಟ್ಟವರು ಈಗಲಾದರೂ ಎಚ್ಚೆತ್ತುಕೊಂಡು ಕೂಲಿನಾಲಿ ಮಾಡಿ ಬದುಕುವ ಬಡಜನರ ಒಪ್ಪೋತಿನ ಊಟಕ್ಕೆ ಆಸರೆಯಾಗಿರುವ ಇಂದಿರಾ ಕ್ಯಾಂಟೀನ್ ಸುತ್ತಮುತ್ತಲಿನ ಸ್ವಚ್ಛತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ