ಚುನಾವಣಾ ಫಲಿತಾಂಶ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಿಗೂ ಮತದಾರ ಬೀಸಿದ ಚಾಟಿ ಎಚ್ಚರಿಕೆ: ಜಿ.ಟಿ.ದೇವೇಗೌಡ

ಬೆಂಗಳೂರು, ಮೇ 25-ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದ ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಿಗೂ ಚಾಟಿ ಬೀಸಿ ಎಚ್ಚರಿಕೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಒಂದು ವರ್ಷ ಆಡಳಿತ ಪೂರೈಸಿದ್ದೇವೆ, ಇನ್ನು ನಾಲ್ಕು ವರ್ಷಗಳ ಕಾಲಾವಧಿ ಇದೆ. ಆ ಅವಧಿಯಲ್ಲಿ ಅಭಿವೃದ್ಧಿಯತ್ತ ಗಮನ ಕೊಡಲಿ ಎಂಬುದು ಜನರ ತೀರ್ಪಾಗಿದೆ ಎಂದು ಹೇಳಿದರು.

ಫಲಿತಾಂಶದಿಂದ ಜೆಡಿಎಸ್‍ನ ಯಾವ ನಾಯಕರು ಬೇಸರಗೊಂಡಿಲ್ಲ. ದೇವೇಗೌಡರು ನಿನ್ನೆಯೇ ಮುಖಂಡರ ಸಭೆ ನಡೆಸಿ ಮತ್ತೊಮ್ಮೆ ಫಿನಿಕ್ಸ್‍ನಂತೆ ಎದ್ದು ಬರುತ್ತೇನೆ ಎಂದು ಪಣತೊಟ್ಟಿದ್ದಾರೆ. ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವಾಗಲೂ ಅವರು ಇದೇ ರೀತಿ ನಿರ್ಧಾರ ಮಾಡಿದ್ದರು. ರಾಜ್ಯದ ಅಭಿವೃದ್ಧಿಗೆ ಮತ್ತೆ ಪಣತೊಟ್ಟಿದ್ದಾರೆ ಎಂದು ಹೇಳಿದರು.

ಇನ್ನು ಮಂಡ್ಯದಲ್ಲಿ ಸೋಲು ಕಂಡಿರುವ ನಿಖಿಲ್‍ಕುಮಾರಸ್ವಾಮಿ ಕೂಡ ಬೇಸರಗೊಂಡಿಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಚಿಕ್ಕವಯಸ್ಸಿನಲ್ಲೇ ಅರ್ಥ ಮಾಡಿಕೊಂಡು ಫಲಿತಾಂಶವನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ.

ಹಾಸನದಲ್ಲಿ ಜಯಗಳಿಸಿರುವ ಪ್ರಜ್ವಲ್ ರೇವಣ್ಣ ಅವರು ದೇವೇಗೌಡರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದರು. ಆದರೆ ಅದನ್ನು ದೇವೇಗೌಡರು ತಿರಸ್ಕರಿಸಿದ್ದಾರೆ. ನನ್ನ ಉತ್ತರಾಧಿಕಾರಿಯಾಗಿ ಹಾಸನದಲ್ಲಿ ಕೆಲಸ ಮಾಡು ಎಂದು ಆಶೀರ್ವದಿಸಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್-ಜೆಡಿಎಸ್‍ನ ಎಲ್ಲಾ ನಾಯಕರು ಶಕ್ತಿ ಮೀರಿ ಕೆಲಸ ಮಾಡಿದರು. ಆದರೆ ಜನತೋ ಜನಾರ್ಧನ ಎಂಬಂತೆ ಮತದಾರರು ತೀರ್ಪು ಕೊಟ್ಟಿದ್ದಾರೆ. ಅದನ್ನು ನಾವೀಗ ಒಪ್ಪಿಕೊಂಡಿದ್ದೇವೆ. ಗೆದ್ದಿರುವ ಬಿಜೆಪಿ ಅಭ್ಯರ್ಥಿಗಳಿಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಮೋದಿಯವರು ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನಕೊಡಲಿ.

ಪುಲ್ವಾಮಾ, ಸರ್ಜಿಕಲ್ ಸ್ಟ್ರೈಕ್‍ಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ನಡೆಸಿದ್ದಾಗಿದೆ. ಇನ್ನು ಮುಂದಾದರೂ ಈ ಮೊದಲು ಭರವಸೆ ಕೊಟ್ಟಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಲಿ, ಅಭಿವೃದ್ಧಿಗೆ ಒತ್ತು ಕೊಡಲಿ. ರಾಜ್ಯದ ಬರ ಪರಿಸ್ಥಿತಿಗೆ, ಕುಡಿಯುವ ನೀರಿಗೆ ಸರ್ಕಾರ ಕಳುಹಿಸಿರುವ ಪ್ರಸ್ತಾವನೆಯಂತೆ ಹಣ ನೀಡಲಿ. ರೈತರ ಕಡೆ ಗಮನ ಕೊಡಲಿ ಎಂದು ಹೇಳಿದರು.

ಲೋಕಸಭಾ ಚುನಾವಣಾ ಫಲಿತಾಂಶ ನಮಗೆ ದೊಡ್ಡ ಪಾಠ ಆಗಿದೆ. ಕೆಲವು ವಿಷಯಗಳನ್ನು ನಾನು ನೇರವಾಗಿ ಹೇಳುವಂತಿಲ್ಲ. ಮಾತನಾಡಿದರೆ ವಿವಾದಗಳಾಗುತ್ತವೆ. ರಾಜ್ಯದ ನಾಯಕರು ಕೂಡ ರಾಜಕಾರಣದ ಬಗ್ಗೆ ಯಾವ ಸಚಿವರೂ ಮಾತನಾಡಬಾರದು, ಕೇವಲ ಇಲಾಖೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಅಸ್ಥಿರಗೊಳಿಸುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ