ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನಿಡಲು ನಿರ್ಧರಿಸಿದ ತೆರೇಸಾ ಮೇ

ಇಂಗ್ಲೆಂಡ್​​: ಬ್ರಟಿನ್​ ಪ್ರಧಾನಿ ತೆರೇಸಾ ಮೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕನ್ಸರ್ವೇಟಿವ್​ ಪಕ್ಷದ ನಾಯಕಿ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ ಮೇ, ಪ್ರಧಾನಿ ಹುದ್ದೆಗೂ ಜೂನ್​ 7ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ತೆರೇಸಾ ಮೇ ರೂಪಿಸಿದ್ದ ಬ್ರೆಕ್ಸಿಟ್​ ಒಪ್ಪಂದಕ್ಕೆ ಅನುಮೋದನೆ ನೀಡಲು ಬ್ರಿಟನ್​ ಸಂಸತ್ತು ಮೂರು ಬಾರಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಭಾರಿ ಟೀಕೆಗೆ ಒಳಗಾಗಿದ್ದರು. ಆದ್ದರಿಂದ, ಪ್ರಧಾನಿ ಹುದ್ದೆ ತ್ಯಜಿಸಲು ನಿರ್ಧರಿಸಿದ್ದರು. ಆದರೆ, ಜೂನ್​ 7ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬ್ರಿಟನ್​ ಪ್ರವಾಸಕ್ಕೆ ಆಗಮಿಸುತ್ತಿರುವ ದಿನದಂದೇ ಮೇ ನಿರ್ಗಮಿಸುತ್ತಿರುವುದು ಮಹತ್ವದ್ದಾಗಿದೆ.

ಮಾರ್ಗರೆಟ್​ ಥ್ಯಾಚರ್​ ನಂತರ ಬ್ರಿಟನ್​ನ ಎರಡನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ತೆರೇಸಾ ಮೇ 10, ಡೌನಿಂಗ್​ ಸ್ಟ್ರೀಟ್​ನಲ್ಲಿರುವ ಪ್ರಧಾನಿ ನಿವಾಸವನ್ನು ಹೊಕ್ಕಿದ್ದರು. ನಾನು ಪ್ರಧಾನಿ ಆದಾಗಿನಿಂದಲೂ ಬ್ರೆಕ್ಸಿಟ್​ ಒಪ್ಪಂದದ ಕುರಿತು ಪಕ್ಷದ ಸಂಸತ್​ ಸದಸ್ಯರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ತನ್ಮೂಲಕ ಪ್ರತಿಷ್ಠಿತರ ಪರವಾಗಿ ಮಾತ್ರವಲ್ಲ ಬ್ರಿಟನ್​ನ ಕಟ್ಟಕಡೆಯ ವ್ಯಕ್ತಿಯ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಾಗಿದೆ. ಹಾಗೂ ಬ್ರೆಕ್ಸಿಟ್​ ವಿಚಾರದಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ಬದ್ಧ ಎಂಬುದನ್ನು ಸಾಬೀತು ಪಡಿಸಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಈ ಪ್ರಯತ್ನದಲ್ಲಿ ನಾನು ವಿಫಲವಾದೆ. ಆದ್ದರಿಂದ, ರಾಜೀನಾಮೆ ನೀಡುತ್ತಿದ್ದೇನೆ ಎಂದು ಮೇ ಭಾವುಕರಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ