ಬ್ರೆಜಿಲ್ ಬಾರ್ ನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ; 11 ಮಂದಿ ಬಲಿ

ಬೆಲೆಮ್:ಶಸ್ತ್ರ ಸಜ್ಜಿತ ಗನ್ ಮ್ಯಾನ್ ಗಳು ಏಕಾಏಕಿ ಬಾರ್ ವೊಂದಕ್ಕೆ ನುಗ್ಗಿ ಗುಂಡು ಹಾರಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವ ಘಟನೆ ಉತ್ತರ ಬ್ರೆಜಿಲ್ ನ ಪಾರಾ ರಾಜ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಏಳು ಮಂದಿ ಗನ್ ಮ್ಯಾನ್ ಗಳು ಬೆಲೆಮ್ ನಗರದಲ್ಲಿರುವ ಬಾರ್ ವೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ ಪರಿಣಾಮ ಆರು ಮಹಿಳೆಯರು, ಐವರು ಗಂಡಸರು ಸೇರಿ ಹನ್ನೊಂದು ಜನರು ಬಲಿಯಾಗಿದ್ದಾರೆಂದು ನ್ಯೂ ಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಓರ್ವ ಗನ್ ಮ್ಯಾನ್ ಗಾಯಗೊಂಡಿದ್ದು, ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಗನ್ ಮ್ಯಾನ್ ಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಗನ್ ಮ್ಯಾನ್ ನನ್ನು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.

ಏಕಾಏಕಿ ಗುಂಡು ಹಾರಿಸಲು ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಆರಂಭಿಸಿರುವುದಾಗಿ ಕ್ಸಿನ್ ಹುವಾ ವರದಿ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ