ಮತಗಟ್ಟೆ ಸಮಿಕ್ಷೆಯಿಂದ ಷೇರುಪೇಟೆಯಲ್ಲಿ ಉತ್ಸಾಹ; ಸೆನ್ಸೆಕ್ಸ್‌ 942 ಅಂಕ ಭರ್ಜರಿ ಜಿಗಿತ

ಮುಂಬಯಿ : ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಬಹಿರಂಗವಾದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿಂದು ಅಮಿತೋತ್ಸಾಹದ ಸುನಾಮಿ ಕಂಡು ಬಂದಿದೆ. ಪರಿಣಾಮವಾಗಿ ಸೆನ್ಸೆಕ್ಸ್‌ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 942 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿದೆ.

ಇದೇ ವೇಳೆ ಡಾಲರ್‌ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 79 ಪೈಸೆಗಳ ಭಾರೀ ಜಿಗಿತವನ್ನು ದಾಖಲಿಸಿದೆ.

ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 929.33 ಅಂಕಗಳ ಏರಿಕೆಯೊಂದಿಗೆ 38,860.10 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 273.50 ಅಂಕಗಳ ಏರಿಕೆಯೊಂದಿಗೆ 11,680.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತಾಗಿದ್ದವು.

ಇಂದು ಬೆಳಗ್ಗಿನ ಟಾಪ್‌ ಗೇನರ್‌ಗಳಾದ ಮಾರುತಿ,ಲಾರ್ಸನ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಆರ್‌ಐಎಲ್‌, ಮಹೀಂದ್ರ, ಇಂಡಸ್‌ ಇಂಡ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಸ್‌ ಬ್ಯಾಂಕ್‌ ಮತ್ತು ವೇದಾಂತ ಶೇರುಗಳು ಶೇ.4ರ ಭರ್ಜರಿ ಏರಿಕೆಯನ್ನು ದಾಖಲಿಸಿದವು.

ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 300ಕ್ಕೂ ಹೆಚ್ಚು ಸೀಟುಗಳನ್ನು ಗಳಿಸುವ ಮೂಲಕ 272ರ ಸರಳ ಬಹುಮತದ ಸಂಖ್ಯೆಯನ್ನು ಸುಲಭವಾಗಿ ಮೀರಿ ಪ್ರಚಂಡ ವಿಜಯ ಸಾಧಿಸುವುದೆಂದು ಮತಗಟ್ಟೆ ಸಮೀಕ್ಷೆಗಳು ಹೇಳಿರುವುದು ಮುಂಬಯಿ ಶೇರು ಮಾರುಕಟ್ಟೆಗೆ ಚೇತೋಹಾರಿಯಾಗಿದೆ. ಇದೇ ಗುರುವಾರ ಮೇ 23ರಂದು ಮತ ಎಣಿಕೆ ನಡೆದು ಚುನಾವಣಾ ಫ‌ಲಿತಾಂಶ ಹೊರಬೀಳಲಿದೆ.

ಇಂದು ಬ್ರೆಂಟ್‌ ಕಚ್ಚಾ ತೈಲ ಶೇ.1.48ರ ಏರಿಕೆ ದಾಖಲಿಸಿ ಬ್ಯಾರಲ್‌ ಗೆ 73.28 ಡಾಲರ್‌ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ