ಮತ ಎಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆ

ಮೈಸೂರು, ಮೇ 19- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮೇ 23ರಂದು ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆದ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಏಜೆಂಟರೊಂದಿಗೆ ನಡೆದ ಸಭೆಯಲ್ಲಿ ಚುನಾವಣಾಧಿಕಾರಿಗಳು ಈ ಸೂಚನೆ ನೀಡಿದ್ದಾರೆ.

ಎಲ್ಲ ಅಭ್ಯರ್ಥಿಗಳು ಮತ್ತು ಏಜೆಂಟರು, ಚುನಾವಣಾ ಆಯೋಗದ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಣಿಕಾ ಕೇಂದ್ರದಲ್ಲಿ ಶಿಸ್ತು-ಸುವ್ಯವಸ್ಥೆ ಕಾಪಾಡಬೇಕು ಎಂದರು.

ಮತ ಎಣಿಕಾ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 14 ಕೊಠಡಿಗಳಲ್ಲಿ ಎಣಿಕಾ ಕಾರ್ಯ ನಡೆಸಲಾಗುವುದು ಎಂದರು.
ಅಂದು ಬೆಳಗ್ಗೆ 7.30ಕ್ಕೆ ಅಭ್ಯರ್ಥಿಗಳು ಅಥವಾ ಏಜೆಂಟರುಗಳ ಸಮ್ಮುಖದಲ್ಲಿ ಸ್ಟ್ರಾಂಗ್‍ರೂಮ್ ಬಾಗಿಲು ತೆರೆಯಲಾಗುತ್ತದೆ. 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಳಗ್ಗೆ 6 ಗಂಟೆಗೆ ಖಜಾನೆಯಲ್ಲಿರುವ ಅಂಚೆ ಮತಗಳನ್ನು ಎಣಿಕಾ ಕೇಂದ್ರಕ್ಕೆ ತರಲಾಗುವುದು ಎಂದ ಅವರು, ಎಲ್ಲ ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತ ಎಣಿಕೆ ಕಾರ್ಯದ ನಂತರ ಲಾಟರಿ ಮೂಲಕ ಐದು ವಿವಿ ಪ್ಯಾಟ್‍ಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಮತ ಎಣಿಕೆ ಕಾರ್ಯಕ್ಕಾಗಿ 2 ಸಾವಿರ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ. ಇದೇ ಮೊದಲ ಬಾರಿಗೆ ಮತ ಎಣಿಕೆ ವೇಳೆ ಎಣಿಕೆ ಕೇಂದ್ರದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳು ಹಾಗೂ ರಹಸ್ಯವನ್ನು ಬಹಿರಂಗಪಡಿಸುವುದಿಲ್ಲ ಎಂದು ಮತ ಎಣಿಕೆಗೂ ಮುನ್ನ ಅಭ್ಯರ್ಥಿಗಳ ಏಜೆಂಟರಿಂದ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ