ನವದೆಹಲಿ: 17ನೇ ಲೋಕಸಭಾ ಚುನಾವಣೆಯ 7ನೇ ಹಾಗೂ ಕೊನೆ ಹಂತದ ಮತದಾನ ಇಂದು ಆರಂಭವಾಗಿದೆ. ಏಳನೇ ಹಂತದಲ್ಲಿ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಲ್ಲಿ ಚುನಾವಣೆ ಆರಂಭವಾಗಿದೆ.
ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿ ಹಾಗೂ ಸಿಎಂ ಆದಿತ್ಯನಾಥ್ ಪ್ರಾಬಲ್ಯದ ಗೋರಖ್ಪುರ ಕ್ಷೇತ್ರಗಳನ್ನು ಒಳಗೊಂಡ ಉತ್ತರ ಪ್ರದೇಶ; ಭಾರಿ ಹಿಂಸಾಚಾರ ಮತ್ತು ಸವಾಲು-ಪ್ರತಿ ಸವಾಲಿಗೆ ಸಾಕ್ಷಿಯಾದ ಪ.ಬಂಗಾಳ; ಇಬ್ಬರು ಕೇಂದ್ರ ಸಚಿವರ ಭವಿಷ್ಯ ನಿರ್ಧರಿಸಲಿರುವ ಪಂಜಾಬ್, ಲಾಲು ‘ಕುಟುಂಬ ಪ್ರತಿಷ್ಠೆ’ಯ ಕದನವಾಗಿರುವ ಬಿಹಾರ ತೀವ್ರ ಕುತೂಹಲ ಮೂಡಿಸಿವೆ.
ಗೋರಖಪುರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಕ್ಕು ಚಲಾಯಿಸಿದರು.
ಪಟನಾದ ರಾಜಭವನದ ಶಾಲೆಯ ಮತಗಟ್ಟೆ ಸಂಖ್ಯೆ 326ರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ ಚಲಾಯಿಸಿದರು.
ಪಂಜಾಬ್ನ ಜಲಂಧರ್ನ ಗರ್ಹಿ ಗ್ರಾಮದ ಮತಗಟ್ಟೆಯಲ್ಲಿ ಖ್ಯಾತ ಕ್ರಿಕೆಟರ್ ಹರಭಜನ್ ಸಿಂಗ್ ಅವರು ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ಪಟನಾ ಸೇಹಬ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅವರು ಪಟನಾದ ಕದಮ್ ಕುನ್ನ ಮತಗಟ್ಟೆ 339ರಲ್ಲಿ ಮತಚಲಾಯಿಸಿದರು. ಪಂಜಾಬ್ನ ಸಚಿವ ನವಜೋತ್ ಸಿಂಗ್ ಸಿಧು ಮತ್ತು ಪತ್ನಿ ನವಜೋತ್ ಕೌರ್ ಸಿಧು ಅಮೃತಸರದ ಮತಗಟ್ಟೆ ಸಂಖ್ಯೆ 134ರಲ್ಲಿ ಮತಚಲಾಯಿಸಿದರು.
ಲೋಕಸಭೆ ಸ್ಪೀಕರ್, ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್ ಅವರು ಮಧ್ಯಪ್ರದೇಶದ ಇಂದೋರ್ನ ಮತಗಟ್ಟೆಯಲ್ಲಿ ಮತಚಲಾಯಿಸಿದರು.
ಉತ್ತರ ಪ್ರದೇಶದ ತಾರಾ ಜೀವನಪುರ ಗ್ರಾಮದ ನಿವಾಸಿಗಳ ಕೈಗೆ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಶಾಹಿ ಹಚ್ಚಿ, ತಲಾ 500 ರೂಪಾಯಿ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ‘ನೀವು ಬಿಜೆಪಿಗೆ ಮತ ನೀಡುವುದಿಲ್ಲವೇ, ಹಾಗಾದರೆ ನೀವು ಮತದಾನ ಮಾಡುವಂತಿಲ್ಲ ಎಂದು ಬಲವಂತವಾಗಿ ಕೈ ಬೆರಳಿಗೆ ಶಾಹಿ ಹಚ್ಚಿದ್ದಾರೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.
ಈ ನಡುವೆ ಬೆಳಗ್ಗೆ 11 ಗಂಟೆಯವರೆಗೆ ಬಿಹಾರದಲ್ಲಿ 18.90%, ಹಿಮಾಚಲ ಪ್ರದೇಶದಲ್ಲಿ 24.29%, ಮಧ್ಯಪ್ರದೇಶದಲ್ಲಿ 28.40%, ಪಂಜಾಬ್ನಲ್ಲಿ 23.36%, ಉತ್ತರ ಪ್ರದೇಶದಲ್ಲಿ 21.89%, ಪಶ್ಚಿಮ ಬಂಗಾಳದಲ್ಲಿ 32.15%, ಜಾರ್ಖಂಡ್ನಲ್ಲಿ 30.33% ಮತ್ತು ಚಂಡೀಗಢದಲ್ಲಿ 22.30% ರಷ್ಟು ಮತದಾನವಾಗಿದೆ.
Lok sabha election-2019,last phase voting