ಇಂದಿನಿಂದ ಮಾವು ಮತ್ತು ಹಲಸು ಹಣ್ಣಿನ ಮೇಳ

ಬೆಂಗಳೂರು,ಮೇ17- ಬೆಳಗಾರರಿಂದ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಒದಗಿಸುವ ಮಾವು ಮತ್ತು ಹಲಸು ಹಣ್ಣಿನ ಮೇಳವನ್ನು ಹಾಪ್‍ಕಾಮ್ಸ್ ಇಂದಿನಿಂದ ಆರಂಭಿಸಿದೆ.

ನಗರದ ಹಡ್ಸನ್ ವೃತ್ತದಲ್ಲಿರುವ ಹಾಪ್‍ಕಾಮ್ಸ್ ನಲ್ಲಿ ವಿವಿಧ ರೀತಿಯ ಮಾವು ಮತ್ತು ಹಲಸುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತಿವೆ.

ರಾಜ್ಯದ ವಿವಿಧೆಡೆ ರೈತರು ಬೆಳೆದಿರುವ ಹಲಸು ಮತ್ತು ಮಾವುಗಳನ್ನು ಗ್ರಾಹಕರಿಗೆ ಕೈಗೆಟಕುವ ರಿಯಾಯ್ತಿ ದರದಲ್ಲಿ ಹಾಪ್‍ಕಾಮ್ಸ್ ಮೂಲಕ ಮಾರಾಟ ಮಾಡಲಾಗುತ್ತಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್, ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ಬಿ.ಮುನೇಗೌಡ, ಚಲನಚಿತ್ರ ನಟ ಬಿ. ಎಸ್.ಲಿಂಗದೇವರು ಮತ್ತಿತರರು ಮಾರಾಟ ಮೇಳಕ್ಕೆ ಚಾಲನೆ ನೀಡಿದರು.

ಬಾದಾಮಿ, ರಸಪುರಿ, ಆಮ್ರಾಪಾಲಿ, ಮಲ್ಲಿಕಾ, ನೀಲಂ, ಮಲಗೋವ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಇಲ್ಲಿ ದೊರೆಯಲಿವೆ.

ಮಾರುಕಟ್ಟೆ ದರಕ್ಕಿಂತ ಶೇ.10ರ ರಿಯಾಯ್ತಿ ದರದಲ್ಲಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.

ಕಳೆದ ವರ್ಷ ಮೇಳದಲ್ಲಿ 750 ಮೆಟ್ರಿಕ್ ಟ್ರನ್ ಮಾವಿನ ಹಣ್ಣನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ ಸುಮಾರು ಒಂದು ಸಾವಿರ ಮೆಟ್ರಿಕ್ ಮಾರಾಟ ಮಾಡುವ ಗುರಿಯನ್ನು ಹಾಪ್‍ಕಾಮ್ಸ್ ಇಟ್ಟುಕೊಂಡಿದೆ.

ದೇ ರೀತಿ ಕಳೆದ ಬಾರಿ250 ಮೆಟ್ರಿಕ್ ಟನ್ ಹಲಸಿನ ಹಣ್ಣು ಮಾರಾಟ ಮಾಡಲಾಗಿತ್ತು. ಈ ಬಾರಿಯು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಮೇಳಕ್ಕೆ ಚಾಲನೆ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇಂತಹ ಮೇಳಗಳು ನಡೆಯುತ್ತಿರುವುದು ತುಂಬ ಸಂತಸದ ವಿಷಯ. ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಉತ್ತಮವಾದ ಮತ್ತು ಆರೋಗ್ಯಕ್ಕೆ ಹಾನಿಕರವಲ್ಲದ ಹಣ್ಣುಗಳನ್ನು ಒದಗಿಸುತ್ತಿರುವ ಹಾಪ್‍ಕಾಮ್ಸ್ ಕಾರ್ಯ ಶ್ಲಾಘನೀಯ ಎಂದರು.

ಮಧ್ಯವರ್ತಿಗಳ ಕಾಟದಿಂದಾಗಿ ಗ್ರಾಹಕರಿಗೆ ಸರಿಯಾದ ಹಣ್ಣುಗಳೇ ಸಿಗುವುದಿಲ್ಲ. ಸಿಕ್ಕರೂ ಬೆಲೆ ಗಗನಮುಖಿಯಾಗಿರುತ್ತದೆ. ಅದರಲ್ಲೂ ರೈತರಿಂದ ಖರೀದಿಸಿ ಶೇ.10ರ ದರದಲ್ಲಿ ರಾಸಾಯನಿಕ ಮಿಶ್ರಣವಿಲ್ಲದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ ಅನುಕೂಲವಾಗಲು ದರದ ಪಟ್ಟಿಯನ್ನು ಪ್ರಕಟಿಸಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ