ಖುಶಿನಗರ್: ಮತದಾನ ನಡೆಯುತ್ತಿದೆಯೆಂದು ಉಗ್ರರನ್ನು ದಮನಮಾಡಲು ಯೋಧರು ಚುನಾವಣಾ ಆಯೋಗದ ಅನುಮತಿ ಕೇಳುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಖುಶಿನಗರದಲ್ಲಿ ನಡೆದ ಚುನಾವಣ ಅಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಮುಂಜಾನೆ ಜಮ್ಮುಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹತ್ಯೆಗೈದ ವಿಚಾರವನ್ನು ಪ್ರಸ್ತಾಪಿಸಿದರು.
ಭಾರತೀಯ ಸೇನಾಪಡೆ ಯೋಧರು ಇಂದು ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈಗ ಕೆಲ ಜನರು ಮತದಾನ ನಡೆಯುತ್ತಿರುವಾಗ ಉಗ್ರರನ್ನು ಕೊಂದಿದ್ದು ಏಕೆ ಎಂದು ಪ್ರಶ್ನಿಸಬಹುದು. ಶಸ್ತ್ರಸಜ್ಜಿತನಾದ ಉಗ್ರ ದಾಳಿ ಮಾಡುವಾಗ, ಆತನನ್ನು ತಡೆಯುವ ಬದಲು ನಮ್ಮ ಯೋಧರು ಚುನಾವಣಾ ಆಯೋಗದ ಬಳಿ ಹೋಗಿ ಅವರ ಅನುಮತಿ ಪಡೆದು ಉಗ್ರನನ್ನು ಕೊಲ್ಲಬೇಕಿಲ್ಲ ಎಂದರು.
6ನೇ ಹಂತದ ಮತದಾನ ನಡೆಯುತ್ತಿರುವಾಗ ಉಗ್ರರನ್ನು ಕೊಂದಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂಬರ್ಥದಲ್ಲಿ ಕೆಲವರು ಮಾತನಾಡುತ್ತಿದ್ದಾರೆ.
ಅಂದರೆ ಏನರ್ಥ? ಉಗ್ರರು ನಮ್ಮ ಯೋಧರ ಎದುರು ಬಾಂಬ್, ಗನ್ಗಳನ್ನು ಹಿಡಿದು ಬಂದು ನಿಂತಾಗ ಸೈನಿಕರು ಪ್ರತಿ ದಾಳಿ ನಡೆಸಲು ಚುನಾವಣಾ ಆಯೋಗದ ಅನುಮತಿಗಾಗಿ ಕಾಯಬೇಕಾ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಕಾಶ್ಮೀರದಲ್ಲಿ ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಇಂಥ ಕಾರ್ಯಾಚರಣೆ ನಡೆಯುತ್ತಿದೆ. ಇದೂ ನನ್ನ ಸ್ವಚ್ಛತಾ ಕಾರ್ಯಕ್ರಮ ಎಂದು ಮೋದಿ ತಿಳಿಸಿದರು.
ಎಸ್ಪಿ ಹಾಗೂ ಬಿಎಸ್ಪಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವುದಿಲ್ಲ. ರಸ್ತೆ ಪಕ್ಕದಲ್ಲಿರುವ ಗೂಂಡಾಗಳನ್ನೇ ಇವರು ನಿಯಂತ್ರಿಸುವುದಿಲ್ಲ.
ಹೀಗಿರುವಾಗ ಅವರು ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡುತ್ತಾರೆ? ಕಾಂಗ್ರೆಸ್ನ ರಕ್ಷಣಾ ನೀತಿ ಭಯೋತ್ಪಾದನೆಗೆ ಹಾಗೂ ನಕ್ಸಲಿಸಂಗೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.
lok sabha election-2019,pm modi,khushinagar