ಇಂಜನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣ-ಆತ್ಮಹತ್ಯೆಯೋ, ಕೊಲೆಯೋ ಎನ್ನುವುದಿನ್ನು ದೃಡಪಟ್ಟಿಲ್ಲ

ಬೆಂಗಳೂರು, ಮೇ 11- ರಾಜ್ಯವನ್ನು ತಲ್ಲಣಗೊಳಿಸಿದ್ದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ನಿಗೂಢ ಸಾವಿನ ಪ್ರಕರಣ ತನಿಖೆಯ ಹಾದಿಯಲ್ಲಿದ್ದು ಅದು ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ಇನ್ನು ದೃಢಪಟ್ಟಿಲ್ಲ ಎಂದು ಸಿಐಡಿ ಸ್ಪಷ್ಟಪಡಿಸಿದೆ.

ಮಧು ಪತ್ತಾರ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು , ವರದಿಯಲ್ಲಿ ಕೆಲವು ಸ್ಪಷ್ಟನೆಗಳನ್ನು ಕೇಳಲಾಗಿದೆ. ಅದೇ ರೀತಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ಕೈ ಸೇರಿಲ್ಲ. ಹೀಗಾಗಿ ಮಧು ಪತ್ತಾರ್ ಅವರ ಪ್ರಕರಣ ಆತ್ಮಹತ್ಯೆಯೋ , ಕೊಲೆಯೇ ಎಂಬ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವೈದ್ಯಕೀಯ ಪರೀಕ್ಷೆಯಲ್ಲಿ ಕೇಳಿರುವ ಸ್ಪಷ್ಟನೆಗಳಿಗೆ ಸಮರ್ಪಕ ಉತ್ತರ ಸಿಗಬೇಕು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಧರಿಸಿ ತನಿಖೆ ನಡೆಸಿದ ನಂತರವಷ್ಟೇ ಸತ್ಯಾಂಶ ಹೊರ ಬೀಳಲಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮಧು ನಿಗೂಢ ಸಾವಿನ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು ತನಿಖೆಯನ್ನು ತೀವ್ರಗೊಳಿಸಿದ್ದೇವೆ. ಆದಷ್ಟು ಬೇಗ ಪ್ರಕರಣಕ್ಕೆ ಇತಿಶ್ರೀ ಹಾಡಲು ಕ್ರಮ ಕೈಗೊಳ್ಳಲಾಗಿದೆ.

ಏನಿದು ಮಧು ಪ್ರಕರಣ: ಕಳೆದ ಏ.13ರಂದು ಮನೆಯಿಂದ ಹೊರ ಹೋಗಿದ್ದ ಮಧು ಪತ್ತಾರ್ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮಧು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಮೂರು ದಿನಗಳ ನಂತರ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಧು ಮಂಡಿಯೂರಿ ಕುಳಿತ ಭಂಗಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಆಕೆಯ ಪೋಷಕರು ಕೊಲೆ ಆರೋಪ ಮಾಡಿದ್ದರು.

ಪೋಷಕರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಧು ನಿಗೂಢ ಸಾವಿನ ಪ್ರಕರಣವನ್ನು ತನಿಖೆ ನಡೆಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸರ್ಕಾರ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.

ಪಿಯುಸಿಯಲ್ಲಿ ಮಧು ಪತ್ತಾರ್ ಜತೆ ವ್ಯಾಸಂಗ ಮಾಡುತ್ತಿದ್ದ ಸುದರ್ಶನ್ ಎಂಬ ವಿದ್ಯಾರ್ಥಿ ಮೇಲೆ ಅನುಮಾನಗೊಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಸುದರ್ಶನ್‍ಗೆ ಕೆಲ ಪ್ರಭಾವಿ ರಾಜಕಾರಣಿಗಳ ಬೆಂಬಲವಿರುವುದರಿಂದ ಆತ ಆರೋಪ ಮುಕ್ತಗೊಳ್ಳುತ್ತಾನೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಕೇಳಿ ಬಂದ ಬೆನ್ನಲ್ಲೇ ಮಧು ಪತ್ತಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಬೆಳವಣಿಗೆ ಬೆನ್ನಲ್ಲೇ ಸಿಐಡಿ ಪೊಲೀಸರು ಮಧು ಪ್ರಕರಣ ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ನಿಗೂಢ ಸಾವಿನ ಸತ್ಯ ಹೊರ ಬರಲು ಇನ್ನು ಕೆಲ ದಿನಗಳ ಕಾಲ ಕಾಯಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ