ತೀವ್ರ ಬರದಿಂದ ತತ್ತರಿಸಿರುವ ಜಿಲ್ಲೆ

ತುಮಕೂರು, ಮೇ 11- ಜಿಲ್ಲೆ ತೀವ್ರ ಬರದಿಂದ ತತ್ತರಿಸಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ನರೇಗಾ ಯೋಜನೆಯಡಿ ದುಡಿಯಲು ಕೆಲಸ ಒದಗಿಸಲು ತುರ್ತು ಕ್ರಮ ಕೈಕೊಳ್ಳುವಂತೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಮಪರ್ಕವಾಗಿ ಬರನಿರ್ವಹಣೆ ಮಾಡುತ್ತಿದ್ದಾರೆ.ಜಿಲ್ಲೆಯಲ್ಲಿ 182 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದು, ಪ್ರತಿ ಕೊಳವೆಬಾವಿಗೆ ಮಾಸಿಕ 16 ಸಾವಿರ ರೂ.ಗಳಿಂದ 18 ಸಾವಿರ ರೂ.ಗಳವರೆಗೆ ಬಾಡಿಗೆ ಹಣ ಪಾವತಿಸಿ ನೀರು ಪಡೆಯಲಾಗುತ್ತಿದೆ.ಒಟ್ಟಾರೆ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಗೆ 40 ಲೀಟರ್‍ನಂತೆ ಪ್ರತಿನಿತ್ಯ ನೀರು ಪೂರೈಕೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 7,08,175(ದನ ಮತ್ತು ಎಮ್ಮೆ) ಜಾನುವಾರುಗಳಿದ್ದು, ರೈತರ ದಾಸ್ತಾನಿನಲ್ಲಿ 2,64,519 ಟನ್ ಒಣಮೇವು ಲಭ್ಯವಿದೆ. ಲಭ್ಯವಿರುವ ಮೇವು ಇನ್ನೂ 11 ವಾರಗಳಿಗೆ ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 21 ಮೇವು ಬ್ಯಾಂಕ್‍ಗಳನ್ನು ಪ್ರಾರಂಭಿಸಿ ಮೇವನ್ನು ವಿತರಿಸಲಾಗುತ್ತಿದೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ|| ಪ್ರಕಾಶ್ ಸಭೆಗೆ ಮಾಹಿತಿ ನೀಡಿದರು.

ಬರದ ಸಮಸ್ಯೆಗಳ ಬಗ್ಗೆ ದೂರುಗಳನ್ನು ಸಲ್ಲಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಹಾಯ ವಾಣಿಯ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಈ ಸಹಾಯವಾಣಿ ಮೂಲಕ ನಿಯಂತ್ರಣಾ ಕೊಠಡಿಗೆ ಬರುವ ದೂರುಗಳ ಬಗ್ಗೆ ಪ್ರತ್ಯೇಕ ವಹಿಗಳನ್ನು ನಿರ್ವಹಿಸಬೇಕು ಎಂದರು.

ಜಿಲ್ಲೆಯ ಜನರು ಕೆಲಸವಿಲ್ಲದೆ ಗೂಳೆ ಹೋಗುವುದನ್ನು ತಪ್ಪಿಸಲು, ನರೇಗಾ ಯೋಜನೆಯಡಿ ಕೆಲಸವನ್ನು ನೀಡಬೇಕು. ಕಳೆದ 2018-19ನೇ ಸಾಲಿನಲ್ಲಿ ಜಿಲ್ಲೆಗೆ ನೀಡಿದ್ದ 50 ಲಕ್ಷ ಮಾನವ ದಿನಗಳಿಗೆ ಎದುರಾಗಿ 51 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.102ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 206 ಕೋಟಿ ರೂ.ಗಳಷ್ಟು ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಈ ಪೈಕಿ 80 ಕೋಟಿ ರೂ.ಗಳಷ್ಟು ಮಾತ್ರ ಬಿಡುಗಡೆಯಾಗಬೇಕಿದೆ ಎಂದು ವಿವರಿಸಿದರು.

ಬರ ನಿರ್ವಹಣೆಗೆ ಸಿಆರ್‍ಎಫ್ ಟಾಸ್ಕ್ ಪೋರ್ಸ್ ಮತ್ತಿತರ ಕಾರ್ಯಕ್ರಮದಡಿ ಒಟ್ಟು 45 ಕೋಟಿ ರೂ.ಗಳನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ.ಈ ಪೈಕಿ 13.40 ಕೋಟಿ ರೂ. ಹಣವನ್ನು ಬರಪರಿಹಾರ ಕಾಮಗಾರಿಗೆ ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಪಾಲಿಕೆ ಆಯುಕ್ತ ಟಿ. ಭೂಬಾಲನ್, ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ