ಕಾಂಗ್ರೆಸ್ ನಾಯಕರ ಪ್ರಕಾರ ಮನುಷ್ಯನ ಜೀವಕ್ಕೆ ಬೆಲೆಯಿಲ್ಲವೇ: ಪ್ರಧಾನಿ ಪ್ರಶ್ನೆ

ರೋಹ್ಟಕ್: ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಸೊಕ್ಕಿನ ಪರಮಾವಧಿ. ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ಹರ್ಯಾಣದ ರೋಹ್ಟಕ್ ನಲ್ಲಿ ನಡೆದ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರ ಹೇಳಿಕೆ ಅಂಹಂಕಾರದ ಹೇಳಿಕೆ. ಗಾಂಧಿ ಕುಟುಂಬದ ಆಪ್ತರ ಈ ಹೇಳಿಕೆ ಕಾಂಗ್ರೆಸ್ ಜನ ಸಾಮಾನ್ಯರ ಮೇಲಿರುವ ಕಾಳಜಿಯನ್ನು ಮತ್ತು ಮಾನವೀಯತೆಯನ್ನು ತೋರಿಸುತ್ತದೆ. ಅಂದು 1984ರಲ್ಲಿ ಇದೇ ಕಾಂಗ್ರೆಸ್ ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ ಸಿಖ್ಖರ ನರಮೇಧ ನಡೆಸಿತ್ತು.

ಅಂದು ಸಾವಿರಾರು ಅಮಾಯಕ ಸಿಖ್ಕರು ತಾವೇಕೆ ಪ್ರಾಣ ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವೂ ಇಲ್ಲದೇ ಸಾವನ್ನಪ್ಪಿದ್ದರು. ಕನಿಷ್ಠ ಪಕ್ಷ ಅವರ ಸಾವಿನ ಕುರಿತು ಮಾನವೀಯ ಮಾತುಗಳನ್ನೂ ಆಡದ ಕಾಂಗ್ರೆಸ್ ಪಕ್ಷದಿಂದ ಇದನ್ನು ಬಿಟ್ಟು ಬೇರೇನು ನಿರೀಕ್ಷಿಸಲು ಸಾಧ್ಯ ಎಂದು ಮೋದಿ ಹೇಳಿದ್ದಾರೆ.

ಆ ಮೂರು ಪದಗಳು ಕಾಂಗ್ರೆಸ್ ಪಕ್ಷದ ಅಸ್ವಸ್ಥ ಮಾನಸಿಕತೆಯನ್ನು, ಕಾಂಗ್ರೆಸ್ ಪಕ್ಷದ ಅಮಾನವೀಯತೆ ಮತ್ತು ಜನರ ಕುರಿತಂತೆ ಆ ಪಕ್ಷಕ್ಕೆ ಇರುವ ಸೊಕ್ಕನ್ನು ತೋರಿಸುತ್ತದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಖ್ ನರಮೇಧದ ಬಗ್ಗೆ ಆಗಿದ್ದು ಆಗಿ ಹೋಯಿತು ಏನು ಮಾಡಲು ಸಾಧ್ಯ. ಈಗ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ರಾಜಕೀಯ ಪಕ್ಷಗಳ ಹೊಸ ಸಮರಕ್ಕೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ