ಲೋಕಸಭೆ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ-ಮಾಜಿ ಸಿಎಂ ಯಡಿಯೂರಪ್ಪ

ಹುಬ್ಬಳ್ಳಿ, ಮೇ 10- ಕಾಂಗ್ರೆಸ್ ಅತೃಪ್ತರಾಗಿರುವ 20 ಶಾಸಕರು ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಲೋಕಸಭೆ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಕುಂದಗೋಳ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಅಸಮಾಧಾನಗೊಂಡಿರುವ ಶಾಸಕರು ಯಾವಾಗ ಬೇಕಾದರೂ ಸರ್ಕಾರದಿಂದ ಹೊರಬರಬಹುದು. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ತಿಳಿಸಿದರು.

ಈ ಸರ್ಕಾರದ ಬಗ್ಗೆ ಕಾಂಗ್ರೆಸ್‍ನ 20 ಕ್ಕೂ ಹೆಚ್ಚು ಶಾಸಕರಿಗೆ ಉತ್ತಮ ಅಭಿಪ್ರಾಯವಿಲ್ಲ. ಅವರೆಲ್ಲ ಯಾವುದೇ ಕ್ಷಣದಲ್ಲಿ, ಏನೇ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಬಹುದು. ಕಾದು ನೋಡಿ ಎಂದು ಅವರು ಹೇಳಿದರು. ಈಗಾಗಲೇ ಬಿಜೆಪಿ 104 ಸದಸ್ಯ ಬಲ ಹೊಂದಿದೆ. ಉಪಚುನಾವಣೆಯ ಗೆಲುವಿನಿಂದ 106 ಸ್ಥಾನಕ್ಕೇರುತ್ತದೆ. ಪಕ್ಷೇತರರ ಬೆಂಬಲ ನಮಗಿದೆ. ಹೀಗಾಗಿ ಸರ್ಕಾರ ರಚನೆಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲಲಿದ್ದು, ನಂತರ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಈಗಾಗಲೇ ಯಡಿಯೂರಪ್ಪ ಹಲವು ಬಾರಿ ಹೇಳಿದ್ದಾರೆ. ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಯನ್ನು ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ