ಇಂದು ಮಾಜಿ ಸಿ.ಎಂ.ಕೆ.ಸಿ.ರೆಡ್ಡಿ ಅವರ 117ನೇ ಜನ್ಮದಿನಾಚರಣೆ

ಬೆಂಗಳೂರು, ಮೇ 5-ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಆದರ್ಶಗಳು ಅನುಕರಣೀಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಕೆ.ಸಿ.ರೆಡ್ಡಿ ಅವರ 117ನೇ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಕೆ.ಸಿ.ರೆಡ್ಡಿ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು.

ವೃತ್ತಿಯಲ್ಲಿ ವಕೀಲರಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮೂರು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು. ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿ, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ.ಸಿ.ರೆಡ್ಡಿ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಸರ್ಕಾರದ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಇಂತಹ ಮಹಾನ್ ನಾಯಕರ ಪ್ರತಿಮೆಯಿಂದ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು. ವಿಧಾನಸೌಧದ ಸುತ್ತಮುತ್ತ ಗಣ್ಯರ ಪ್ರತಿಮೆಗಳೇ ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದೇಶಪ್ರೇಮಿಗಳ ಹಾಗೂ ನಾಯಕರ ಪ್ರತಿಮೆಗಳು ಯುವ ಸಮುದಾಯದಲ್ಲಿ ಸ್ಫೂರ್ತಿ ತುಂಬುತ್ತವೆ. ನಾಡಿಗೆ, ದೇಶಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ಕೆ.ಸಿ.ರೆಡ್ಡಿ ಅವರ ಮೊಮ್ಮಗಳು ವಸಂತ ಕವಿತಾ ರೆಡ್ಡಿ, ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ