ಮಕ್ಕಳ ಪ್ರೇಮ ಪ್ರಕರಣಗಳಿಂದ ನೊಂದ ಪೋಷಕರ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಮೇ 5-ಪ್ರೀತಿಗಾಗಿ ಪ್ರೇಮಿಗಳ ಆತ್ಮಹತ್ಯೆ ಹೆಚ್ಚು ಸುದ್ದಿಯಾಗುತ್ತಿತ್ತು, ಆದರೆ ಕಳೆದೆರಡು ದಿನಗಳಿಂದ ಪ್ರೇಮ ಪ್ರಕರಣಗಳಿಗೆ ಪೋಷಕರು ಬಲಿಯಾಗುತ್ತಿರುವುದು ಕೇಳಿ ಬರುತ್ತಿದೆ. ನಿನ್ನೆಯಿಂದೀಚೆಗೆ ಒಟ್ಟು ಮೂರು ಮಂದಿ ಪೋಷಕರು ಮಕ್ಕಳ ಪ್ರೇಮ ಪ್ರಕರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಶ್ಚಿತಾರ್ಥ ಮುಗಿದ ಮೇಲೆ ಮಗಳು ಪ್ರಿಯಕರನೊಂದಿಗೆ ಓಡಿ ಹೋಗಿದ್ದರಿಂದ ಮನನೊಂದ ಚಿಕ್ಕಬಳ್ಳಾಪುರದ ಚೌಡಪ್ಪ(43), ಚೌಡಮ್ಮ(37) ದಂಪತಿ ನಿನ್ನೆ ಸಂಜೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ಈ ದಂಪತಿ ಮಗ್ಗ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಯಲಹಂಕದಲ್ಲಿ ವಾಸವಿದ್ದರು.

ಇತ್ತೀಚೆಗೆ ಕಿರಿಯ ಮಗಳ ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ಕೂಡ ನಡೆದಿತ್ತು. ಮದುವೆಯ ದಿನಾಂಕ ನಿಗದಿಯಾದ ಮೇಲೆ ಮಗಳು ತನ್ನ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದಳು. ಎರಡು ದಿನಗಳ ಹಿಂದೆ ನಡೆದ ಈ ಬೆಳವಣಿಗೆ ಕುಟುಂಬವನ್ನು ಕಂಗಾಲು ಮಾಡಿತ್ತು.

ಇವರ ಮೊದಲು ಮಗಳು ಕೂಡ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಎರಡನೇ ಮಗಳು ಅದೇ ದಾರಿ ತುಳಿದಿದ್ದರಿಂದ ತೀವ್ರ ಮನನೊಂದಿದ್ದ ದಂಪತಿ ಸ್ವಗ್ರಾಮ ಬೇವಿನಹಳ್ಳಿಗೆ ಆಗಮಿಸಿದ್ದಾರೆ.

ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿರುವ ಹುಣಸೇಮರಕ್ಕೆ ನೇಣು ಬಿಗಿದುಕೊಂಡು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹ ಕಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದು, ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ಇದೇ ರೀತಿ ಪ್ರಕರಣದಿಂದ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುದ್ದಿನಿಂದ ಸಾಕಿದ ಮಗಳು ಮದುವೆಯಾಗಿ ಮೂವರು ಮಕ್ಕಳಿರುವ ವ್ಯಕ್ತಿಯನ್ನು ಪ್ರೀತಿಸಿ ಓಡಿ ಹೋಗಿದ್ದರಿಂದ ತಂದೆ ತೀವ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ವರೆಗೂ ಪ್ರೇಮಪ್ರಕರಣಗಳಿಗೆ ಕುಟುಂಬಸ್ಥರ ವಿರೋಧಕ್ಕಾಗಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದುದು ಕಂಡುಬರುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಪೋಷಕರು ಆತ್ಮಹತ್ಯೆಗಳು ಆತಂಕ ಸೃಷ್ಟಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ