ಉಪಚುನಾವಣೆ ಪ್ರಚಾರದಲ್ಲಿ ಇನ್ನೂ ಪಾಲ್ಗೊಳ್ಳದ ಜೆಡಿಎಸ್ ನಾಯಕರು

ಬೆಂಗಳೂರು, ಮೇ 5- ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿದ್ದರೂ ಜೆಡಿಎಸ್ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಇದುವರೆಗೂ ಸ್ಪಷ್ಟತೆ ಇಲ್ಲ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಹೀಗಾಗಿ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದ್ದು, ಆ ಭಾಗದ ಸ್ಥಳೀಯ ಜೆಡಿಎಸ್ ಮುಖಂಡರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದುವರೆಗೂ ವಿಧಾನಸಭೆ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ. ಇನ್ನು ಐದಾರು ದಿನಗಳಲ್ಲೂ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಈ ಇಬ್ಬರೂ ನಾಯಕರು ಪಾಲ್ಗೊಳ್ಳುವ ಬಗ್ಗೆ ಜೆಡಿಎಸ್‍ನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಪ್ರಸಕ್ತ ಲೋಕಸಭೆ ಚುನಾವಣೆ ಹಾಗೂ ಅದಕ್ಕೂ ಮುಂಚೆ ನಡೆದಿದ್ದ ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಜೆಡಿಎಸ್ ವರಿಷ್ಠರು ಜಂಟಿ ಚುನಾವಣಾ ಪ್ರಚಾರ ಕೈಗೊಂಡಿದ್ದರು.

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಮೈತ್ರಿ ಸರ್ಕಾರದ ಸಚಿವರೊಂದಿಗೆ ಗೌಡರು ಹಾಗೂ ಕುಮಾರಸ್ವಾಮಿ ಜಂಟಿ ಚುನಾವಣಾ ಪ್ರಚಾರವನ್ನು ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಮಂಡ್ಯ, ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಸಮರ್ಪಕವಾಗಿ ಪಾಲನೆಯಾಗಿಲ್ಲ ಎಂಬ ಅಪಸ್ವರ ಉಭಯ ಪಕ್ಷಗಳಲ್ಲೂ ಮತದಾನದ ನಂತರ ಕೇಳಿ ಬರುತ್ತಿವೆ.

ಈಗಾಗಲೇ ಕಾಂಗ್ರೆಸ್ ನಾಯಕರು ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.ಆ ಭಾಗದ ಸ್ಥಳೀಯ ಜೆಡಿಎಸ್ ನಾಯಕರು ಕೂಡ ಸಾಥ್ ನೀಡಿದ್ದಾರೆ. ಬಹಿರಂಗ ಪ್ರಚಾರಕ್ಕೆ ಉಭಯ ಕ್ಷೇತ್ರಗಳಲ್ಲೂ ಮೇ 17ರ ವರೆಗೆ ಕಾಲಾವಕಾಶವಿದೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಗೌಡರು ಮತ್ತು ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವರೇ ಅಥವಾ ಪ್ರಚಾರದಿಂದ ದೂರ ಉಳಿಯುವರೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ