ಉಪಚುನಾವಣೆಯ ಪ್ರಚಾರಕ್ಕೆ ತಲೆಹಾಕದ ಜೆಡಿಎಸ್ ನಾಯಕರು

ಬೆಂಗಳೂರು, ಮೇ 5-ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರಚಾರಕ್ಕೆ ತೋರಿಸಿದ ಉತ್ಸಾಹವನ್ನು ಜೆಡಿಎಸ್ ವಿಧಾನಸಭೆಯ ಉಪಚುನಾವಣೆ ತೋರಿಸದೆ ಇರುವುದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ.

ಮೇ 19 ರಂದು ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‍ನ ಭದ್ರಕೋಟೆಗಳಾಗಿವೆ. ಜೆಡಿಎಸ್‍ನ ಪ್ರಾಬಲ್ಯ ಇಲ್ಲಿ ನಗಣ್ಯವಾಗಿದ್ದರೂ, ಪ್ರತಿ ಚುನಾವಣೆಯಲ್ಲೂ ಈ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಲ್ಪಸ್ವಲ್ಪ ಮತಗಳನ್ನು ಪಡೆದುಕೊಳ್ಳುತ್ತಿತ್ತು. ಈ ಬಾರಿ ಮೈತ್ರಿಯಿಂದಾಗಿ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್‍ಗೆ ಅವಕಾಶ ಮಾಡಿಕೊಡಲಾಗಿದೆ.

ಆದರೆ ಜೆಡಿಎಸ್‍ನ ರಾಜ್ಯಮಟ್ಟದ ಪ್ರಭಾವಿ ನಾಯಕರು ಮತ್ತು ಸಚಿವರು ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳತ್ತ ತಲೆ ಹಾಕದೆ ದೂರ ಉಳಿದಿದ್ದಾರೆ.

ಸ್ಥಳೀಯವಾಗಿ ಜೆಡಿಎಸ್‍ನ ಕೆಲ ಕಾರ್ಯಕರ್ತರು ನಾಯಕರು ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಾದಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ನಾಯಕರುಗಳು ತಮ್ಮೆಲ್ಲ ಶಕ್ತಿ, ಸಾಮಥ್ರ್ಯಗಳನ್ನು ಧಾರೆಯೆರೆದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮಣಿಸಿ ಮತ್ತೆ ಕಾಂಗ್ರೆಸ್ಸನ್ನು ಗೆಲ್ಲಿಸಿಕೊಳ್ಳಲು ಬೆವರಿಳಿಸುತ್ತಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಜೆಡಿಎಸ್ ನಾಯಕರು ಉಪಚುನಾವಣೆ ನಡೆಯುತ್ತಿದೆ ಎಂಬುದನ್ನೇ ಮರೆತಂತಿದೆ. ಇದು ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಾಯಕರು ಜಂಟಿ ಪ್ರಚಾರ ನಡೆಸಿದರು. ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಮಂಡ್ಯ, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ವಿಜಯಪುರ, ಹಾಸನ, ತುಮಕೂರು ಕ್ಷೇತ್ರಗಳಿಗೆ ತಂಡೋಪತಂಡವಾಗಿ ತೆರಳಿ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿದರು. ಚುನಾವಣೆ ಮುಗಿದ ಬಳಿಕ ಜೆಡಿಎಸ್ ನಾಯಕರು ವಿಶ್ರಾಂತಿಗೆ ತೆರಳಿದ್ದಾರೆ.ಕಾಂಗ್ರೆಸ್ ನಾಯಕರು ಈ ಕ್ಷಣದವರೆಗೂ ಪ್ರಚಾರದಲ್ಲಿ ಬಸವಳಿಯುತ್ತಿದ್ದಾರೆ.

ವಿಧಾನಸಭೆಯ ಉಪಚುನಾವಣೆಯ ಫಲಿತಾಂಶ ಮೈತ್ರಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್-ಜೆಡಿಎಸ್‍ನ ಸಂಖ್ಯಾಬಲ ಈಗಾಗಲೇ 118ಕ್ಕೆ ಕುಸಿದಿದೆ. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತೆ ಜಯಗಳಿಸಿದರೆ ಬಲಾಬಲ ಯಥಾರೀತಿ ಉಳಿಯಲಿದೆ. ಇಲ್ಲವಾದರೆ 116ಕ್ಕೆ ಕುಸಿಯಲಿದೆ. ಇದರಿಂದ ಬಿಜೆಪಿಯ ಬಲವೃದ್ಧಿಯಾಗಲಿದ್ದು, ಇನ್ನು ನಾಲ್ಕೈದು ಮಂದಿ ರಾಜೀನಾಮೆ ನೀಡಿದರೆ ಸಾಕು ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತ.

ಇಂತಹ ಸೂಕ್ಷ್ಮ ಸಂದರ್ಭಗಳಿದ್ದರೂ ಜೆಡಿಎಸ್ ನಾಯಕರು ಉಪಚುನಾವಣೆಯಲ್ಲಿ ತೊಡಗಿಸಿಕೊಳ್ಳದೆ ತಮ್ಮ ಪಾಡಿಗೆ ತಾವಿರುವುದು ಮೈತ್ರಿ ಧರ್ಮವಲ್ಲ ಎಂದು ಕಾಂಗ್ರೆಸ್ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ