ಪ್ರಚಾರಕ್ಕೆ ಆಗಮಿಸದ ನಾಯಕರು ಕಾಂಗ್ರೇಸ್ ಅಭ್ಯರ್ಥಿಯ ಕಂಗಾಲು

ಚಿಂಚೋಳಿ,ಮೇ 5- ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಯಾವ ನಾಯಕರು ಪ್ರಚಾರಕ್ಕೆ ಆಗಮಿಸದೇ ಇರುವುದರಿಂದ ಅಭ್ಯರ್ಥಿ ಸುಭಾಷ್ ರಾಥೋಡ್ ಕಂಗಾಲಾಗಿದ್ದಾರೆ.

ಚಿಂಚೋಳಿ ಮತ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶಾಸಕರು, ಸಚಿವರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ 70 ಪ್ರಮುಖರನ್ನು ಪ್ರಚಾರಕ್ಕೆ ನೇಮಕ ಮಾಡಿದ್ದರು.ಈವರೆಗೆ ಯಾರೂ ಇತ್ತ ತಲೆ ಹಾಕಿಲ್ಲ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಶರಣುಪ್ರಕಾಶ ಪಾಟೀಲ, ಈಶ್ವರ ಖಂಡ್ರೆ ಸೇರಿದಂತೆ ಯಾರೂ ಇನ್ನೂ ಪ್ರಚಾರಕ್ಕೆ ಆಗಮಿಸಿಲ್ಲ. ಹೀಗಾಗಿ ಕೈ ಅಭ್ಯರ್ಥಿಯಲ್ಲಿ ಆತಂಕ ಶುರುವಾಗಿದೆ.

ಸುಭಾಷ್ ರಾಥೋಡ್ ಗೆಲುವಿಗೆ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಪ್ತರೊಂದಿಗೆ ಮಾತುಕತೆ ನಡೆಸಿ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಮನವಿ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅಬ್ಬರದ ಸಮಾವೇಶ, ಪ್ರಚಾರ, ರೋಡ್ ಶೋ, ರ್ಯಾಲಿಗಳು ಇನ್ನೂ ನಡೆದಿಲ್ಲ. ಉಸ್ತುವಾರಿ ವಹಿಸಿಕೊಂಡ ಶಾಸಕರು, ಸಚಿವರು, ಪಕ್ಷದ ಪದಾಧಿಕಾರಿಗಳೂ ಇನ್ನೂ ಪ್ರಚಾರಕ್ಕೆ ಬಾರದಿರುವುದನ್ನು ನೋಡಿದರೆ ಏನಾಗುತ್ತೋ ಏನೋ ಎನ್ನುವ ಆತಂಕ ಸ್ಥಳೀಯ ಮುಖಂಡರನ್ನು ಕಾಡತೊಡಗಿದೆ. ಆದರೆ ಎಲ್ಲವೂ ಸರಿಯಾಗುತ್ತದೆ. ಏನೂ ಆಗುವುದಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳುತ್ತಿದ್ದಾರೆ. ಚಿಂಚೋಳಿ ಮತ್ತು ಕುಂದಗೋಳ ಎರಡೂ ಕ್ಷೇತ್ರಗಳ ಉಪಚುನಾವಣೆ ಕಾಂಗ್ರೆಸ್‍ಗೆ ಅತ್ಯಂತ ಮಹತ್ವದ್ದಾಗಿದೆ. ಕುಂದಗೋಳ ಕ್ಷೇತ್ರಕ್ಕೆ ಕೊಟ್ಟಷ್ಟು ಪ್ರಾತಿನಿಧ್ಯವನ್ನು ಚಿಂಚೋಳಿ ಕ್ಷೇತ್ರಕ್ಕೆ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಆದರೆ ಕಾಂಗ್ರೆಸ್ ನಾಯಕರು ಹೇಳುವುದೇ ಬೇರೆ.ಎಲ್ಲರಿಗೂ ಈಗಾಗಲೇ ವೇಳಾಪಟ್ಟಿ ಸಿದ್ದಮಾಡಲಾಗಿದೆ.ಅದರ ಪ್ರಕಾರ ನಾಯಕರು ತೆರಳಿ ಪ್ರಚಾರ ಮಾಡಲಿದ್ದಾರೆ. ಯಾರಿಗೆ ಯಾವ ಜವಾಬ್ದಾರಿ ನೀಡಿದ್ದೇವೆ ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ನಮ್ಮ ಪಕ್ಷ ಅಲ್ಲಿ ಗೆಲ್ಲುತ್ತದೆ.ಯಾರು ಕುಟುಂಬ ರಾಜಕಾರಣವನ್ನು ವಿರೋಧಿಸಿ ಪಕ್ಷ ಬಿಟ್ಟು ಹೋಗಿದ್ದರೋ ಅವರೇ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ