ಕಾಡಾನೆ ದಾಳಿಗೆ ಕೂಲಿ ಕಾರ್ಮಿಕನ ಬಲಿ

ಎಚ್.ಡಿ.ಕೋಟೆ, ಮೇ 4- ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಎಚ್.ಡಿ.ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೂಲಿಕಾರ್ಮಿಕ ಹನುಮಂತರಾಯಪ್ಪ (50)ಮೃತ ದುರ್ದೈವಿ.

ಮಾದಾಪುರ ಮತ್ತು ಹೈರಿಗೆ ಗ್ರಾಮದ ನಡುವಿನ ದೇವರಾಜ ಕಾಲೋ ನಿ ಬಳಿಯ ಹೆಬ್ಬಳ್ಳ ಜಲಾಶಯದ ಎಡೆದಂಡೆ ಬಳಿ ಮದವೇರಿದ ಸಲಗ ಈತನ ಎದೆಗೆ ಚುಚ್ಚಿದರಿಂದ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದಾನೆ.ಆನೆ ಓಡಿಸಲು ಬಂದ ನೂರಾರು ಮಂದಿ ಕೂಗಾಟಕ್ಕೆ ಹೆದರಿ ಆನೆ ಅಲ್ಲಿಂದ ಕಾಲ್ಕಿತ್ತಿದೆ.

ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕಕ್ಕೇರ ಹೋಬಳಿಯಿಂದ ಹೆಬ್ಬಳ್ಳ ಜಲಾಶಯದ ಚಾನಲ್ ಕಾಮಗಾರಿಗಾಗಿ ಬಂದಿದ್ದ 50-60ಜನರಲ್ಲಿ ಹನುಮಂತರಾಯಪ್ಪ ಸಹ ಬಂದಿದ್ದರು.

ಇಂದು ಬೆಳಿಗ್ಗೆ ಈತನ ತಮ್ಮ ಮಾದಪ್ಪನಿಗೆ ಹೆಣ್ಣಾನೆ ಅಟ್ಟಿಸಿಕೊಂಡು ಬಂದಾಗ ಅದನ್ನು ಓಡಿಸಲು ಬಂದಿದ್ದ ಹನುಮಂತರಾಯಪ್ಪನಿಗೆ ಸಲಗ ಬಂದು ತಿವಿದಿದೆ.

ಈ ವೇಳೆ ತೀವ್ರವಾಗಿ ಅಸ್ವಸ್ಥಗೊಂಡ ಹನುಮಂತರಾಯಪ್ಪನಿಗೆ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‍ಗೆ ಕರೆ ಮಾಡಿತಾದರೂ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರೇ ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗುವ ವೇಳೆಗೆ ಆತ ಕೊನೆಯುಸಿರೆಳೆದಿದ್ದ.

ಕಳೆದ 15ದಿನಗಳಿಂದ ತಾಲೂಕಿನ ಚಿಕ್ಕದೇವಮ್ಮ, ಕುಂದೂರು ಬೆಟ್ಟಗಳ ಪ್ರದೇಶವಾದ ಜೈಪುರ, ಹಂಪಾಪುರ, ಮಾದಾಪುರಗಳಲ್ಲಿ ಸಲಗ ಮತ್ತು ಹೆಣ್ಣಾನೆ ಓಡಾಡಿಕೊಂಡಿತ್ತು. ಇಂದು ಈ ಎರಡು ಆನೆಗಳು ದಾಳಿಗೆ ಮುಂದಾಗಿದ್ದು ಹೆಣ್ಣಾನೆ ಅಟ್ಟಿಸಿಕೊಂಡು ಬಂದಿದ್ದ ತಮ್ಮನನ್ನು ಉಳಿಸಲು ಹೋದ ಹನುಮಂತಪ್ಪರಾಯಪ್ಪ ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಡಿಸಿಎಫ್ ಕೆ.ಸಿ.ಪ್ರಶಾಂತ್, ಕುಮಾರ್, ಎಎಸ್‍ಐ ನಾರಾಯಸ್ವಾಮಿ, ಎಸಿಎಫ್ ಪರಮೇಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ