ಗೆಲುವಿಗಾಗಿ ರಣವ್ಯೂಹ ರಚಿಸಿರುವ ಕಾಂಗ್ರೇಸ್

ಬೆಂಗಳೂರು, ಮೇ 1-ವಿಧಾನಸಭೆ ಉಪಚುನಾವಣೆ ನಡೆಯುತ್ತಿರುವ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಗೆಲುವಿಗಾಗಿ ರಣವ್ಯೂಹವನ್ನೇ ರಚಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂಚೋಳಿ ಕ್ಷೇತ್ರದಲ್ಲಿ ಮೇ 10, 11, 12 ರಂದು, ಕುಂದಗೋಳ ಕ್ಷೇತ್ರದಲ್ಲಿ 14,15, 16ರಂದು ಪ್ರಚಾರ ನಡೆಸಲಿದ್ದಾರೆ.

ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಗೃಹ ಸಚಿವ ಎಂ.ಬಿ.ಪಾಟೀಲ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರಂತಹ ಘಟಾನುಘಟಿಗಳನ್ನು ಚಿಂಚೋಳಿ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಕುಂದಗೋಳ ಕ್ಷೇತ್ರಕ್ಕೆ ಸಚಿವರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಎಚ್.ಕೆ.ಪಾಟೀಲ್, ಮಾಜಿ ಸಚಿವರಾದ ವಿನಯ್‍ಕುಲಕರ್ಣಿ, ಸಂತೋಷ್ ಲಾಡ್ ಅವರನ್ನು ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ.

ಈ ಬಾರಿ ರಾಜ್ಯ ಅಥವಾ ರಾಷ್ಟ್ರೀಯ ನಾಯಕರುಗಳಿಗೆ ಹೆಚ್ಚಿನ ಒತ್ತು ನೀಡದೆ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡಲಾಗಿದೆ.ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರುಗಳು ಅತಿಥಿಗಳಾಗಿ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

ಸ್ಥಳೀಯವಾಗಿ ಚಿಂಚೋಳಿಯಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಕುಂದಗೋಳದಲ್ಲಿ ವಿನಯ್‍ಕುಲಕರ್ಣಿ ಚುನಾವಣೆಗೆ ಮುಂದಾಳಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ