ನಿಗೂಢ ಹಿಮಮಾನವ ಯೇತಿ ಹೆಜ್ಜೆ ಗುರುತು ಪತ್ತೆ: ಭಾರತೀಯ ಸೇನೆ

ನವದೆಹಲಿ: ನಿಗೂಢ ಜೀವಿ ಯೇತಿಯ ಹೆಜ್ಜೆಗುರುತುಗಳನ್ನು ನೇಪಾಳದ ಮಕಾಲು ಬೇಸ್‌ ಕ್ಯಾಂಪ್‌ ಬಳಿ ಕಂಡಿರುವುದಾಗಿ ಭಾರತೀಯ ಸೇನೆ ಹೇಳಿಕೆ ನೀಡಿದೆ.

ಪರ್ವತಾರೋಹಣ ತಂಡದ ಜತೆಗೆ ಯಾತ್ರೆ ವೇಳೆ 32×15 ಇಂಚು ಗಾತ್ರದ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದು ಪ್ರಾಚೀನ ಜೀವಿ ಯೇತಿಯದೇ ಇರಬೇಕು ಎಂದು ಸೇನೆ ನಂಬಿದೆ ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಸೇನೆ, ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಪರ್ವತಾರೋಹಣ ತಂಡ ಪೌರಾಣಿಕ ಜೀವಿ ‘ಯೇತಿ’ಯ ನಿಗೂಢ ಹೆಜ್ಜೆ ಗುರುತುಗಳನ್ನು ಕಂಡಿದೆ. ಮಕಾಲು ಬೇಸ್‌ ಕ್ಯಾಂಪ್ ಬಳಿ 2019ರ ಏಪ್ರಿಲ್ 9ರಂದು ಈ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ನಿಗೂಢ ಹಿಮ ಮಾನವನ ಹೆಜ್ಜೆ ಗುರುತುಗಳು ಮಕಾಲು- ಬರುನ್ ನ್ಯಾಷನಲ್ ಪಾರ್ಕ್‌ ಬಳಿ ಮಾತ್ರ ಈ ಮೊದಲು ಪತ್ತೆಯಾಗಿತ್ತು ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೇನೆ, ‘ಹಿಮ ಮಾನವನ ಬಗ್ಗೆ ದಾಖಲೆಗಳಿದ್ದರೆ ಫೋಟೋಗಳನ್ನು ಸೆರೆ ಹಿಡಿದು ವೈಜ್ಞಾನಿಕ ವಿಶ್ಲೇಷಣೆಗಾಗಿ ತಜ್ಞರ ಜತೆ ಹಂಚಿಕೊಳ್ಳಿ’ ಎಂದು ಸಲಹೆ ನೀಡಿದೆ.

ಪರ್ವತಾರೋಹಿಗಳ ತಂಡ ಯೇತಿಯ ಹೆಜ್ಜೆ ಗುರುತುಗಳ ಫೋಟೋಗಳನ್ನೂ ಕಳುಹಿಸಿತ್ತು. 10 ದಿನಗಳ ಕಾಲ ಆ ದಾಖಲೆಗಳನ್ನು ಹಿಂದಿನ ದಾಖಲೆಗಳ ಜತೆ ಪರಿಶೀಲಿಸಿ ಬಹಳಷ್ಟು ಹೋಲಿಕೆ ಕಂಡು ಬಂದ ಬಳಿಕವಷ್ಟೇ ಬಿಡುಗಡೆ ಮಾಡಲಾಗಿದೆ ಎಂದು ಸೇನೆ ಹೇಳಿದೆ.

‘ಇದು ಅತ್ಯಂತ ಕುತೂಹಲಕಾರಿ ವಿಷಯವಾಗಿದ್ದು, ವಿಜ್ಞಾನಿಗಳು ಇದರ ಬಗ್ಗೆ ನಿರ್ಧರಿಸಿಲಿ ಎಂದು ಫೋಟೋಗಳನ್ನು ಬಹಿರಂಗಗೊಳಿಸುತ್ತಿರುವುದಾಗಿ’ ಸೇನೆ ಹೇಳಿದೆ.

ಯೇತಿ ಎಂಬ ಹಿಮ ಮಾನವನ ಕುರಿತ ಕುತೂಹಲ ಶತಮಾನಗಳಷ್ಟು ಹಳೆಯದು. 1950ರ ದಶಕದಲ್ಲಿ ಬ್ರಿಟಿಷ್ ಯಾತ್ರಿಕ ಎರಿಕ್ ಸ್ಟೀಫನ್ ಎವರೆಸ್ಟ್ ಶಿಖರ ಏರಲು ಪರ್ಯಾಯ ದಾರಿ ಹುಡುಕುತ್ತಿದ್ದ ವೇಳೆ ಬೃಹತ್ ಗಾತ್ರದ ಹೆಜ್ಜೆ ಗುರುತುಗಳನ್ನು ಕಂಡಿದ್ದಾಗಿ ಮೊದಲು ಬಹಿರಂಗಪಡಿಸಿದ್ದ.

Mysterious footprints of mythical beast Yeti sighted, claims Indian Army

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ