ನಟಿ ರಮ್ಯಾ ವಿರುದ್ಧ ಬುಲೆಟ್ ಪ್ರಕಾಶ್ ಮತ್ತೆ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಸಾದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುವ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ವಿರುದ್ಧ ಹಾಸ್ಯ ನಟ ಬುಲೆಟ್​ ಪ್ರಕಾಶ್​ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ರಮ್ಯಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್​ ಹಿಟ್ಲರ್​ ಬಾಲಕಿಯೊಬ್ಬಳ ಕಿವಿ ಹಿಂಡುತ್ತಿರುವ ಫೋಟೋ ಜತೆಗೆ ನರೇಂದ್ರ ಮೋದಿಯವರು ಬಾಲಕನೋರ್ವನ ಕಿವಿ ಹಿಂಡುತ್ತಿರುವ ಫೋಟೋವನ್ನು ಕೋಲಾಜ್​ ಮಾಡಿ ಶೇರ್​ ಮಾಡಿದ್ದರು ಈ ಬಗ್ಗೆ ಕಿಡಿಕಾರಿದ್ದ ನಟ ಬುಲೆಟ್ ಪ್ರಕಾಶ್, ನಿವು ಮಗುವಿದ್ದಾಗ ನಿಮ್ಮ ತಂದೆಯವರು ನಿಮ್ಮ ಕಿವಿಯನ್ನು ಹಿಂಡಿದ್ದರೆ, ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು. ನಿಮಗೆ ವಿಶ್ವ ನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದ್ದರು.

ಇಂದು ಕೂಡ ರಮ್ಯಾ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಬುಲೆಟ್ ಪ್ರಕಾಶ್, ವಿಡಿಯೋ ಮೂಲಕ ಕಿಡಿಕಾರಿದ್ದಾರೆ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದು ತಿರುಗೇಟು ನೀಡಿದ್ದಾರೆ.

ರಮ್ಯಾ ಅವರು ರಾಷ್ಟ್ರೀಯ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತಾಡೋದು ಸರಿ ಅಲ್ಲ. ಒಬ್ಬ ನಾಯಕನ ಬಗ್ಗೆ ಹೀಯಾಳಿಸಿ ಮಾತಾಡೋದು ತಪ್ಪು ಅನಿಸಿತ್ತು. ಹೀಗಾಗಿ ನಿನ್ನೆ ನಾನು ಟ್ವೀಟ್ ಮಾಡಿದ್ದೆ. ರಮ್ಯಾ ಅವರ ಮನಸ್ಥಿತಿ ಹೇಗಿದೆ ಅಂದರೆ, ಪಾಕಿಸ್ತಾನ ಸ್ವರ್ಗ.

ಇಂತಹವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಏನೂ ಮಾಡೋದಕ್ಕೆ ಆಗಲ್ಲ. ಹೀಗಾಗಿ ಇನ್ನು ಮುಂದೆಯಾದರೂ ಮೇಡಂ ಅವರು ರಾಜಕಾರಣದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳಲಿ. ರಾಜಕೀಯ ತಜ್ಞರ ಬಳಿ ಹೋಗಿ ಟ್ಯೂಷನ್ ತೆಗೆದುಕೊಳ್ಳಲಿ. ಹೀಗೆ ಕಲಿತರೆ ತುಂಬಾ ಸಹಾಯವಾಗುತ್ತದೆ. ಸಮಾಜಕ್ಕೂ ಹೆಲ್ಪ್ ಆಗುತ್ತದೆ ಎಂದಿದ್ದಾರೆ. ಅಲ್ಲದೆ ಒಬ್ಬ ವಿಶ್ವನಾಯಕನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ, ಅರ್ಹತೆ ಹಾಗೂ ಜವಾಬ್ದಾರಿಯನ್ನು ಬಿಟ್ಟು ಹೊರಬಂದಿದ್ದೀರಿ. ಇದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಗುಡುಗಿದ್ದಾರೆ.

comedy actor bullet prakash slams on ramya again

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ