ಆಡಿಯೋ ಪ್ರಕರಣ-ದರ್ಶನ್ ಎಂಬ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯ

ತುಮಕೂರು, ಏ.27- ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‍ನವರಿಂದ ಸಂಸದ ಮುದ್ದಹನುಮೇಗೌಡರು ಮತ್ತು ಮಾಜಿ ಶಾಸಕ ರಾಜಣ್ಣ ಅವರು ತಲಾ ಮೂರುವರೆ ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ದರ್ಶನ್ ಎಂಬ ವ್ಯಕ್ತಿಯನ್ನು ಕೂಡಲೇ ಬಂಧಿಸಿ ತನಿಖೆ ಕೈಗೊಂಡು, ಈತನ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕೆಂದು ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ, ನಾಗಣ್ಣ, ದೇವರಾಜ್ ಒತ್ತಾಯಿಸಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಶನ್ ಎಂಬ ವ್ಯಕ್ತಿ ಲೋಕಸಭೆ ಚುನಾವಣೆ ಸಂಬಂಧ ಜೆಡಿಎಸ್‍ನಿಂದ ಮುದ್ದಹನುಮೇಗೌಡ ಹಾಗೂ ರಾಜಣ್ಣ ತಲಾ ಮೂರೂವರೆ ಕೋಟಿ ಪಡೆದಿದ್ದರೂ ದೇವೇಗೌಡರ ಪರವಾಗಿ ಪ್ರಚಾರ ಮಾಡಿಲ್ಲ ಎಂಬ ಬಗ್ಗೆ ದೂರವಾಣಿಯಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡಿದ್ದ ಆಡಿಯೋ ವೈರಲ್ ಆಗಿದ್ದು, ಇದು ನಮ್ಮ ನಾಯಕರಿಗೆ ನಮ್ಮ ಅಪಮಾನ ಮಾಡಿದಂತೆ ಎಂದು ಆಕ್ಷೇಪಿಸಿದರು.

ನಮ್ಮ ನಾಯಕರು ಹಣಕ್ಕೆ ಒತ್ತುಕೊಟ್ಟವರಲ್ಲ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತಬರುವಂತೆ ಕೆಲಸ ಮಾಡಿದ್ದಾರೆ. ಆದರೂ ಬಾಯಿಗೆ ಬಂದಂತೆ ಇಂತಹ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಿದ್ದೇವೆ ಎಂದರು.

ಕೂಡಲೇ ದರ್ಶನನ್ನು ವಶಕ್ಕೆ ಪಡೆದು ಈ ಬಗ್ಗೆ ತನಿಖೆ ಕೈಗೊಳ್ಳಬೇಕು. ಹಾಗೆಯೇ ಈತನ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಅವರು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ