ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲೂ ಮಳೆ ಸಾಧ್ಯತೆ..!

ಬೆಂಗಳೂರು, ಏ.26- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇನ್ನೆರಡು ದಿನಗಳೊಳಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಚಂಡಮಾರುತದ ನೇರ ಪರಿಣಾಮ ರಾಜ್ಯದ ಮೇಲಾಗದಿದ್ದರೂ ಏಪ್ರಿಲ್ 28ರಿಂದ ಮೇ 2ರ ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾ ಹಾಗೂ ತಮಿಳುನಾಡಿನ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಇನ್ನೆರಡು ದಿನದೊಳಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಂಭವವಿದೆ.

ನಿರೀಕ್ಷಿತ ಚಂಡಮಾರುತಕ್ಕೆ ಫನಿ ಎಂಬ ಹೆಸರಿಡಲಾಗಿದೆ.ತಮಿಳುನಾಡಿನ ದಕ್ಷಿಣ ಭಾಗಕ್ಕೆ ತಲುಪುವ ನಿರೀಕ್ಷೆ ಇತ್ತು. ಆದರೆ, ದಿಕ್ಕಿನಲ್ಲಿ ಬದಲಾವಣೆಗಳು ಕಂಡುಬಂದಿದ್ದು, ಪೂರ್ವ ದಿಕ್ಕಿನತ್ತ ಮುನ್ನಡೆಯುತ್ತಿದೆ.ಇನ್ನೆರಡು ದಿನಗಳಲ್ಲಿ ಚಂಡಮಾರುತದ ಸ್ಪಷ್ಟವಾದ ಸ್ವರೂಪ ಮತ್ತು ದಿಕ್ಕು ಗೊತ್ತಾಗಲಿದ್ದು, ಆನಂತರ ಮಳೆ ಪ್ರಮಾಣವನ್ನು ಅಂದಾಜಿಸಲಾಗುತ್ತದೆ ಎಂದರು.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಲಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಹಗುರದಿಂದ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಫೆ.28ರಿಂದಲೇ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ.ಚಂಡಮಾರುತದ ಪರೋಕ್ಷ ಪರಿಣಾಮ ರಾಜ್ಯದ ಮೇಲಾಗಲಿದ್ದು, ಮೇ 5ರ ವರೆಗೂ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಅಲ್ಲದೆ, ಮುಂಗಾರು ಪೂರ್ವ ಮಳೆ ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಈಗಾಗಲೇ ಬೀಳುತ್ತಿದೆ. ಅಲ್ಲಲ್ಲಿ ಚದುರಿದಂತೆ ಬೇಸಿಗೆ ಮಳೆ ಕೂಡ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ