ಐಎನ್​ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ: ಲೆಫ್ಟಿನೆಂಟ್ ಕಮಾಂಡರ್ ಸಾವು

ಕಾರವಾರ: ಭಾರತೀಯ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್.ಚೌಹಾಣ್ ಮೃತಪಟ್ಟಿದ್ದಾರೆ.

ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ನೌಕೆಯನ್ನು ಲಂಗರು ಹಾಕುವ ವೇಳೆ ದುರ್ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ, ಹೊಗೆಯಿಂದ ಉಸಿರುಗಟ್ಟಿ ಚೌಹಾಣ್ ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ನೌಕೆಗೆ ಗಂಭೀರ ಸ್ವರೂಪದ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ